ADVERTISEMENT

ಮೀನುಗಾರರ ಹಿತರಕ್ಷಣೆಗೆ ಬಿಜೆಪಿ ಬದ್ಧ

ಸಂವಾದದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 16:44 IST
Last Updated 11 ಏಪ್ರಿಲ್ 2019, 16:44 IST
ಮಂಗಳೂರಿನ ಕೆನರಾ ಹೈಸ್ಕೂಲ್‌ನಲ್ಲಿ ಗುರುವಾರ ಮೀನುಗಾರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮಾತನಾಡಿದರು.
ಮಂಗಳೂರಿನ ಕೆನರಾ ಹೈಸ್ಕೂಲ್‌ನಲ್ಲಿ ಗುರುವಾರ ಮೀನುಗಾರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮಾತನಾಡಿದರು.   

ಮಂಗಳೂರು: ಬಿಜೆಪಿ ಮೀನುಗಾರರ ಹಿತರಕ್ಷಣೆಗೆ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.

ನಗರದ ಕೆನರಾ ಹೈಸ್ಕೂಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಮೀನುಗಾರರ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಲಾಗಿದೆ. ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಆರಂಭಿಕವಾಗಿ ₹500 ಕೋಟಿ ಅನುದಾನವನ್ನು ಸಚಿವಾಲಯಕ್ಕೆ ನೀಡಲಾಗಿದೆ. ಬರುವ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಸಚಿವಾಲಯ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ADVERTISEMENT

ಸಮಾಜದಲ್ಲಿ ಕೆಳಹಂತದಲ್ಲಿರುವ ಪ್ರತಿಯೊಬ್ಬ ನಾಗರಿಕನ ಅಭಿವೃದ್ಧಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯಯೋಜನೆ ರೂಪಿಸಿದೆ. ಎಲ್ಲ ಕ್ಷೇತ್ರದ ಜನರ ಅಭಿವೃದ್ಧಿಯೇ ನಮ್ಮ ಗುರಿ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ ಎಂದರು.

ಮೀನುಗಾರ ಸಮುದಾಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ‘ಓಷಿಯನ್‌ ಸ್ಮಾರ್ಟ್‌’ ಯೋಜನೆ ಆರಂಭಿಸಿದೆ. ಇದರಡಿ ಆಧುನಿಕ ತಂತ್ರಜ್ಞಾನ ಬಳಸಿ, ಸಮುದ್ರದಲ್ಲಿ ಇರುವ ಮೀನಿನ ಪ್ರಮಾಣದ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಯೋಜನೆಯಿಂದ ಸುಮಾರು 5 ಲಕ್ಷ ಮೀನುಗಾರರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಯುಪಿಎ ಸರ್ಕಾರ ಕೈಗೆತ್ತಿಕೊಳ್ಳದ ಹಾಗೂ ನನೆಗುದಿಗೆ ಬಿದ್ದಿದ್ದ ಎಲ್ಲ ಯೋಜನೆಗಳನ್ನು ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿದ್ಯುತ್ ಸಂಪರ್ಕ ಇಲ್ಲದ 18,600 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 9.70 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರ್ಕಾರದ 453 ಯೋಜನೆಗಳ ಫಲಾನುಭವಿಗಳಿಗೆ ₹6.07 ಲಕ್ಷ ಕೋಟಿ ಸಹಾಯಧನವನ್ನು ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದು ವಿವರಿಸಿದರು.

ಕೃಷಿಕರಿಗೆ ನೀಡುವ ಆದ್ಯತೆಯನ್ನು ಮೀನುಗಾರರಿಗೂ ನೀಡಬೇಕು, ಮೀನು ಸಾಗಣೆ ವಾಹನಗಳಿಗೆ ವಿಧಿಸಲಾಗುತ್ತಿರುವ ಶುಲ್ಕ ರದ್ದುಪಡಿಸಬೇಕು. ಸಾಂಪ್ರದಾಯಿಕ ನಾಡದೋಣಿಗಳಿಗೆ ನೀಡಲಾಗುತ್ತಿರುವ ಸೀಮೆಎಣ್ಣೆ ಪ್ರಮಾಣವನ್ನು ಹೆಚ್ಚಿಸುವಂತೆ ಮೀನುಗಾರ ಸಂಘದ ಪ್ರತಿನಿಧಿಗಳು ಮನವಿ ಮಾಡಿದರು.

ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಸೌಲಭ್ಯಗಳನ್ನು ಒದಗಿಸಬೇಕು. ಮೀನುಗಾರಿಕೆ ಬಂದರುಗಳ ನಿರ್ವಹಣೆಯನ್ನು ಮೀನುಗಾರರಿಗೆ ನೀಡಬೇಕು. ಮೀನುಗಾರ ಸಮುದಾಯದವರು ಒಗ್ಗಟ್ಟಾಗಿದ್ದು, ಸೌಲಭ್ಯಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಉಳ್ಳಾಲ ನಗರಸಭೆ ಅಧ್ಯಕ್ಷ ಬಾಬು ಬಂಗೇರ, ಬಿಜೆಪಿ ಮುಖಂಡರಾದ ರಾಮಚಂದ್ರ ಬೈಕಂಪಾಡಿ, ನಿತಿನ್‌ಕುಮಾರ್, ಪ್ರತಾಪ್‌ ಸಿಂಹ ನಾಯಕ್‌, ಗೋಪಾಲಕೃಷ್ಣ ಹೇರಳೆ, ಶೋಭೇಂದ್ರ ಸಸಿಹಿತ್ಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.