ADVERTISEMENT

ಕುಕ್ಕೇಡಿ ಸ್ಫೋಟ: ಪಟಾಕಿ ಘಟಕದ ಮಾಲೀಕ ಪರಾರಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 7:58 IST
Last Updated 29 ಜನವರಿ 2024, 7:58 IST
ಕುಕ್ಕೇಡಿಯಲ್ಲಿ ಸ್ಫೋಟ ಸಂಭವಿಸಲು ಕಾರಣವಾದ ಪಟಾಕಿ ತಯಾರಿ ಘಟಕ
ಕುಕ್ಕೇಡಿಯಲ್ಲಿ ಸ್ಫೋಟ ಸಂಭವಿಸಲು ಕಾರಣವಾದ ಪಟಾಕಿ ತಯಾರಿ ಘಟಕ   

ಮಂಗಳೂರು: ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಬಳಿಯ ಕುಕ್ಕೇಡಿಯ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ ಸಂಜೆ ಸ್ಫೋಟಕ್ಕೆ ಕಾರಣವಾದ ‘ಸಾಲಿಡ್‌ ಫೈರ್‌ ವರ್ಕ್ಸ್‌’ ಮಳಿಗೆಯ ಸಯ್ಯದ್ ಬಶೀರ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಸ್ಫೋಟದ ರಭಸಕ್ಕೆ ಛಿದ್ರಗೊಂಡ ದೇಹದ ಭಾಗಗಳು ಸುಮಾರು ಒಂದು ಎಕರೆಯಷ್ಟಿರುವ ಅಡಿಕೆ ತೋಟದಲ್ಲಿ ಛಿದ್ರವಾಗಿ ಅಲ್ಲಲ್ಲಿ ಬಿದ್ದಿದ್ದು, ಘಟನೆಯ ತೀವ್ರತೆಗೆ ಸಾಕ್ಷಿಯಾಗಿದ್ದವು.

ಗೋಳಿಯಂಗಡಿ ಸಮೀಪದ  ನರ್ಸರಿಯೊಂದರ ಬಳಿ ಬಶೀರ್‌ ಅವರ ಮನೆ ಇದೆ. ಪಟಾಕಿ ತಯಾರಿ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟ ಮಾಹಿತಿ ಸಿಗುತ್ತಿದ್ದಂತೆಯೇ ಬಶೀರ್‌ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಸ್ಥಳಕ್ಕೆ ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್  ಸೇರಿದಂತೆ  ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಪಟಾಕಿ ತಯಾರಿ ಘಟಕಕ್ಕೆ 2024ರವರೆಗೆ ಪರವಾನಗಿ ಇತ್ತು. ಸ್ಫೋಟಕ್ಕೆ ಖಚಿತ ಕಾರಣ ಏನೆಂದು ತಿಳಿದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸ್ಫೋಟ ಸಂಭವಿಸಿದ ಘಟಕದ 100 ಮೀ ದೂರದಲ್ಲಿ ಜಿಂಡೊ ಎಂಬುವರ ಮನೆ ಇದ್ದು, ಅದರ ಗೋಡೆಗಳು ಬಿರುಕು ಬಿಟ್ಟಿವೆ. ಕಿಟಕಿ ಗಾಜುಗಳು ಪುಡಿಯಾಗಿವೆ. ಫ್ಯಾನ್ ಕಳಚಿ ಕೆಳಗೆ ನೇತಾಡುತ್ತಿತ್ತು.  ಮನೆಯವರು ಕೇರಳಕ್ಕೆ ಹೋಗಿದ್ದ ಕಾರಣ ಯಾರಿಗೂ ಅಪಾಯಸಂಭವಿಸಿಲ್ಲ. ಈ ಪಟಾಕಿ ತಯಾರಿ ಘಟಕದಲ್ಲಿ ಕಾರ್ಯ ನಿರ್ವಹಿಸುವ ಕೆಲವು ಕಾರ್ಮಿಕರು ಹೊರಗೆ ಇದ್ದ ಕಾರಣ ಅವರೂ ಅಪಾಯದಿಂದ ಪಾರಾಗಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು.

’ಘಟಕದ 100 ಮೀ. ದೂರದಲ್ಲಿ  ವೆಂಕಪ್ಪ - ಕಮಲ ದಂಪತಿ ವಾಸವಾಗಿದ್ದು, ಅವರ ಮನೆಯ ಚಾವಣಿಯ ಶೀಟು ತುಂಡಾಗಿ ಕಳಚಿ ಬಿದ್ದಿವೆ. ಅವರ ಮನೆಯ ಗೋಡೆಗಳೂ ಬಿರುಕು ಬಿಟ್ಟಿವೆ. ಸ್ಫೋಟದ ರಭಸಕ್ಕೆ ಅಡುಗೆ ಮನೆ ಅಸ್ತವ್ಯಸ್ತವಾಗಿದೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮನೆಯವರು ಹೊರಗೆ ಹೋಗಿದ್ದರು. ಆದರೆ,  ಈ ದುರ್ಘಟನೆಯ ಬಳಿಕ ವೃದ್ಧ ದಂಪತಿ ಭಯಬಿತರಾಗಿ ದುಃಖಿಸುತ್ತಿದ್ದಾರೆ‘ ಎಂದರು.

ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಬಳಿಯ ಕುಕ್ಕೇಡಿಯ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಒಬ್ಬನ ಮೃತದೇಹ ದೊರೆತಿದ್ದು ಇಬ್ಬರ ದೇಹದ ಭಾಗಗಳು ಸ್ಫೋಟದ ರಭಸಕ್ಕೆ ಛಿದ್ರವಾಗಿ ಚದುರಿ ಬಿದ್ದಿವೆ.  ತ್ರಿಶೂರಿನ ವರ್ಗೀಸ್ ಹಾಸನ ಅಂಕ‌ನಾಯಕನಹಳ್ಳಿ ಚೇತನ್ ಕೇರಳದ ಸ್ವಾಮಿ ಮೃತಪಟ್ಟವರು.  ಕುಕ್ಕೇಡಿಯ ಬಶೀರ್ ಎಂಬುವರ ಜಮೀನಿನಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಹಾಸನದ ದಿನೇಶ ಕಿರಣ ಅರಸೀಕೆರೆಯ ಕುಮಾರ ಚಿಕ್ಕಮಾರಹಳ್ಳಿಯ ಕಲ್ಲೇಶ ಕೇರಳದ ಪ್ರೇಮ್ ಕೇಶವ ಸೇರಿದಂತೆ ಒಟ್ಟು 9 ಮಂದಿ ಕಾರ್ಮಿಕರು ಇಲ್ಲಿ ಪಟಾಕಿ ತಯಾರಿಯಲ್ಲಿ ತೊಡಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಸ್ಥಳದಲ್ಲಿ ಶೆಡ್ ಸಂಪೂರ್ಣ ಧ್ವಂಸವಾಗಿದ್ದು ಇದರ ಸದ್ದು 4 ಕಿ.ಮೀ. ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.  ‘ಸಾಲಿಡ್‌ ಫೈರ್‌ ವರ್ಕ್ಸ್‌’ ಎಂಬ ಈ ಪಟಾಕಿ ತಯಾರಿಕಾ ಘಟಕ 50 ವರ್ಷಗಳಿಂದ ಇದೆ. ಇಲ್ಲಿ ಪಟಾಕಿ ತಯಾರಿಸಿ  ಹಲವಾರು ಜಾತ್ರೆ ಹಾಗೂ ಇತರ ಕಾರ್ಯಕ್ರಮಗಳಿಗೆ ಪೂರೈಸುತ್ತಿದ್ದರು. ಇದಕ್ಕೆ ಪರವಾನಗಿ ಇತ್ತೇ ಎಂಬುದು ಖಚಿತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.