ADVERTISEMENT

ಸಾವಿರ ಯುನಿಟ್ ರಕ್ತ ಸಂಗ್ರಹ: ನಳಿನ್ ಕುಮಾರ್

ರಕ್ತದಾನ ಶಿಬಿರ: ವಿವಿಧ ಸಂಘಟನೆಗಳ ನೇತೃತ್ವ

​ಪ್ರಜಾವಾಣಿ ವಾರ್ತೆ
Published 1 ಮೇ 2021, 5:05 IST
Last Updated 1 ಮೇ 2021, 5:05 IST
ಮಂಗಳೂರಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ವೇದವ್ಯಾಸ ಕಾಮತ್ ರಕ್ತದಾನ ಮಾಡಿದರು.
ಮಂಗಳೂರಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ವೇದವ್ಯಾಸ ಕಾಮತ್ ರಕ್ತದಾನ ಮಾಡಿದರು.   

ಮಂಗಳೂರು: ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ‌ರಕ್ತದಾನ ಕಾರ್ಯ ಮಾಡುತ್ತಿದೆ. ಒಂದು ದಿನದಲ್ಲಿ ಸುಮಾರು 1ಸಾವಿರ ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಬಿಜೆಪಿ ನಗರ ದಕ್ಷಿಣ ಮಂಡಲ, ಸೇವಾಂಜಲಿ ಚಾರಿಟಬಲ್ ಟ್ರಸ್ಟ್, ಕೆ.ಎಂ.ಸಿ ಆಸ್ಪತ್ರೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ ಬಾರಿ ಕೋವಿಡ್ ಹರಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ‘ಸೇವಾ ಹೀ ಸಂಘಟನ್’ ಆಂದೋಲನಕ್ಕೆ ಕರೆ ನೀಡಿದ್ದರು. ಈಗ ಎದ್ದಿರುವ ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಕೂಡ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರ ಮಾದರಿಯಾಗಿದೆ’ ಎಂದರು.

ADVERTISEMENT

ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಪ್ರಮುಖ ಹನುಮಂತ್ ಕಾಮತ್ ಮಾತನಾಡಿ, ಟ್ರಸ್ಟ್ ಮೂಲಕ ಕಳೆದ ವರ್ಷ ನಿತ್ಯ 5 ರಿಂದ 8 ಸಾವಿರ ಜನರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ವೆನ್ಲಾಕ್ ಆಸ್ಪತ್ರೆಗೆ ಸತತ 3 ತಿಂಗಳ ಕಾಲ ಉಚಿತ ಊಟದ‌ ವ್ಯವಸ್ಥೆ ಮಾಡಲಾಗಿತ್ತು. 23 ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರವನ್ನು ಟ್ರಸ್ಟಿನ ಮೂಲಕ ಆಯೋಜಿಸಲಾಗುತ್ತಿದೆ. ಟ್ರಸ್ಟಿನ ಪ್ರಮುಖರಾದ ನರೇಶ್ ಶೆಣೈ, ನರೇಶ್ ಪ್ರಭು ಹಾಗೂ ಚೇತನ್ ಕಾಮತ್ ನೇತೃತ್ವದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದೇವೆ’ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಿಕಲ್ ಕಂಪನಿ ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರು, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ‌ ಸುದರ್ಶನ್ ಎಂ., ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜಪ್ಪಿನಮೊಗರು, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್ ಗರೋಡಿ, ಲೀಲಾವತಿ ಪ್ರಕಾಶ್, ಸದಸ್ಯರಾದ ಪೂರ್ಣಿಮಾ, ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ‌ ಶೆಟ್ಟಿ ಇದ್ದರು.

‘ಪ್ರತಿ ವಾರ್ಡ್‌ಗೆ ಬಸ್ ವ್ಯವಸ್ಥೆ’

‘18 ವರ್ಷ ಮೇಲಿನವರಿಗೆ ಲಸಿಕೆ ನೀಡುವ ಕಾರ್ಯ ಸದ್ಯ ಆರಂಭವಾಗಲಿದೆ. ತಜ್ಞರ ಪ್ರಕಾರ ಲಸಿಕೆ ಪಡೆದವರು ಕನಿಷ್ಠ 50 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಆ ಸಂದರ್ಭದಲ್ಲಿ ರಕ್ತದ ಕೊರತೆ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಕಾರಣ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ನಗರ ದಕ್ಷಿಣ ಕ್ಷೇತ್ರದ ಪ್ರತಿ ವಾರ್ಡ್‌ಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾರ್ಯಕರ್ತರನ್ನು ರಕ್ತದಾನ ಶಿಬಿರಕ್ಕೆ ಕರೆತರಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.