ADVERTISEMENT

ಆಳ್ವಾಸ್‌ ವಿದ್ಯಾರ್ಥಿಗಳಿಂದ ಅಂಗಾಂಗ ದಾನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 6:19 IST
Last Updated 9 ಮಾರ್ಚ್ 2022, 6:19 IST

ಮಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹನ ಸಂವಹನ ವಿಭಾಗದ ವಿದ್ಯಾರ್ಥಿಗಳಿಂದ ಅಂಗಾಂಗ ದಾನ ಜಾಗೃತಿ ಅಭಿಯಾನವನ್ನು ಮಾ.10 ರಂದು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾರ್ಯಕ್ರಮದ ಸಂಚಾಲಕಿ ಶ್ರೀಲತಾ ಎಸ್‌. ತಂತ್ರಿ, ಈ ಕಾರ್ಯಕ್ರಮವನ್ನು ಆರ್ಗನ್‌ ಡೊನೇಷನ್‌ ಇಂಡಿಯಾ ಫೌಂಡೇಶನ್‌ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ–ಅಂಶಗಳ ಪ್ರಕಾರ, ಶೇ 0.01 ರಷ್ಟು ಭಾರತೀಯರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ಜನರಲ್ಲಿ ಅರಿವಿನ ಕೊರತೆ, ಧಾರ್ಮಿಕ ನಂಬಿಕೆ ಹಾಗೂ ಮೂಢ ನಂಬಿಕೆಗಳಿಂದ ಜನರು ಅಂಗಾಂಗ ದಾನಕ್ಕೆ ಮುಂದೆ ಬರುತ್ತಿಲ್ಲ. ಇದನ್ನು ನಿವಾರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ADVERTISEMENT

ಪ್ರತಿ ವರ್ಷ 1.5 ಲಕ್ಷದಿಂದ 2 ಲಕ್ಷ ಕಿಡ್ನಿಗಳ ಕಸಿ ಅಗತ್ಯವಿದೆ. ಆದರೆ, 8 ರಿಂದ 10 ಸಾವಿರ ಕಿಡ್ನಿ ಕಸಿ ಮಾತ್ರ ಆಗುತ್ತಿವೆ. 40–50 ಸಾವಿರ ಲಿವರ್‌ ಕಸಿ ಅಗತ್ಯವಿದ್ದು, 1,700–1,800 ಮಾತ್ರ ಸಾಧ್ಯವಾಗುತ್ತಿದೆ. 2 ಲಕ್ಷ ಹೃದಯ ಕಸಿ ಅವಶ್ಯಕತೆ ಇದ್ದು, ಕೇವಲ 3,500 ಹೃದಯ ಕಸಿ ಸಾಧ್ಯವಾಗಿದೆ ಎಂದು ವಿವರಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಇದುವರೆಗೆ ವಿದ್ಯಾರ್ಥಿಗಳೂ ಸೇರಿದಂತೆ 102 ಜನರು ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಇನ್ನಷ್ಟು ಜನರು ಮಾಡುವ ನಿರೀಕ್ಷೆ ಇದೆ ಎಂದ ಅವರು, ಈ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಅಂಗಾಂಗಗಳ ಅಗತ್ಯ ಇರುವವರು ಹಾಗೂ ದಾನಿಗಳ ನಡುವಿನ ಸೇತುವೆಯಾಗಿ ಕೆಲಸ ಮಾಡುವ ಪ್ರಯತ್ನ ಇದಾಗಿದೆ ಎಂದರು.

ಆರ್ಗನ್‌ ಡೊನೇಷನ್‌ ಇಂಡಿಯಾ ಫೌಂಡೇಷನ್‌ನ ಲಾಲ್‌ ಗೋಯಲ್‌ ಮುಖ್ಯ ಅತಿಥಿಯಾಗಿದ್ದು, ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಅವರು ಈ ಸಂದರ್ಭದಲ್ಲಿ ಅಂಗಾಂಗ ದಾನದ ವಾಗ್ದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.