ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತುಹಾಕಲಾಗಿದೆ ಎನ್ನಲಾದ ಮೃತದೇಹದ ಅವಶೇಷ ಕಾಡಿನೊಳಗೆ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆಯೇ ಧರ್ಮಸ್ಥಳದ ನೇತ್ರಾವತಿ ನದಿ ಸೇತುವೆ ಜನರಿಂದ ಗಿಜಿಗುಡಲಾರಂಭಿಸಿತು.
ಈ ಸುದ್ದಿ ತಿಳಿದು ಆಸುಪಾಸಿನ ಗ್ರಾಮಗಳ ಜನರು ನೇತ್ರಾವತಿ ಸೇತುವೆಯತ್ತ ಧಾವಿಸಿದರು. ಸೇತುವೆಯ ಮೇಲೆ ಸೇರಿದ್ದ ಜನರನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಮೃತದೇಹದ ಅವಶೇಷ ಪತ್ತೆಯಾದ ಜಾಗದಲ್ಲಿ ಏನು ಬೆಳವಣಿಗೆ ನಡೆಯುತ್ತಿದೆ ಎಂಬುದನ್ನು ತಿಳಿಯುವ ಕೌತುಕ ಅಲ್ಲಿ ಸೇರಿದ ಸಾರ್ವಜನಿಕರದು. ‘ಮೃತದೇಹ ಸಿಕ್ಕಿದೆಯಂತಲ್ಲವೇ? ಒಂದೇ ಸಿಕ್ಕಿದ್ದಾ? ತುಂಬಾ ಸಿಕ್ಕಿವೆಯೇ? ಗಂಡಸಿನದ್ದೋ ಹೆಂಗಸಿನದ್ದೋ...’ ಎಂದು ಮಾಧ್ಯಮದವರಿಗೆ, ಪೊಲೀಸ್ ಸಿಬ್ಬಂದಿಗೆ ಪ್ರಶ್ನೆಗಳ ಸುರಿಮಳೆಗೈದು ಕುತೂಹಲ ತಣಿಸಿಕೊಳ್ಳಲು ಯತ್ನಿಸಿದರು. ಈ ಮಾರ್ಗವಾಗಿ ಸಾಗಿಬಂದ ವಾಹನಗಳೂ ಶೋಧ ಕಾರ್ಯ ನಡೆಯುತ್ತಿದ್ದ ಕಾಡಿನ ಬಳಿ ಜನ ಸೇರಿರುವುದನ್ನು ಕಂಡು ನಿಧಾನವಾಗಿ ಸಾಗಿದವು. ಈ ಪ್ರಕರಣ ಸಂಬಂಧ ಇಲ್ಲಿ ಶೋಧ ಕಾರ್ಯ ನಡೆಯುವ ಬಗ್ಗೆ ಮೊದಲೇ ತಿಳಿದ ವಾಹನ ಸವಾರರು ಈ ಬಗ್ಗೆ ಸ್ಥಳದಲ್ಲಿದ್ದವರ ಬಳಿ ವಿಚಾರಿಸಿ ಮುಂದೆ ಸಾಗಿದರು.
ಮೃತದೇಹದ ಅವಶೇಷ ಪತ್ತೆಯಾದ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದು ಅಲ್ಲಿ ಸೇರಿದವರಿಗೆ ಏನೂ ಕಾಣಿಸುತ್ತಿರಲಿಲ್ಲ. ಆ ಜಾಗಕ್ಕೆ ಮಣ್ಣು ಅಗೆಯುವ ಯಂತ್ರವನ್ನು ಸಾಗಿಸಿದ್ದು, ನೀರನ್ನು ತೆಗೆಸಲು ಪಂಪ್ ಹಾಗೂ ಕೊಳವೆಗಳನ್ನು ಸಾಗಿಸಿದ್ದು, ಪೊಲೀಸ್ ಶ್ವಾನವನ್ನು ಕರೆಸಿಕೊಂಡಿದ್ದು, ಅಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲು ತಗಡಿನ ಶೀಟುಗಳನ್ನು ತರಿಸಿದ್ದು, ಮಹಜರು ನಿರತ ಅಧಿಕಾರಿಗಳಿಗೆ, ಸಿಬ್ಬಂದಿಗೆ, ವಿಧಿವಿಜ್ಞಾನ ತಜ್ಞರಿಗೆ, ಭದ್ರತಾ ಸಿಬ್ಬಂದಿಗೆ ಮತ್ತು ಕಾರ್ಮಿಕರಿಗೆ ಊಟವನ್ನು ಕಾಡಿನೊಳಗೆ ತಲುಪಿಸಿದ ಬೆಳವಣಿಗೆಗಳು ಸೇತುವೆ ಬಳಿ ಸೇರಿದ್ದ ಜನರ ಕೌತುಕವನ್ನು ಮತ್ತಷ್ಟು ಹೆಚ್ಚಿಸಿದವು.
ಮೃತದೇಹದ ಅವಶೇಷ ಸಿಕ್ಕ ಜಾಗದಲ್ಲಿ ಮಹಜರು ಕಾರ್ಯ ಕತ್ತಲಾವರಿಸುವವರೆಗೂ ಮುಂದುವರಿಯಿತು. ಸಂಜೆ 7 ಗಂಟೆ ದಾಟಿದರೂ ಅಧಿಕಾರಿಗಳ ತಂಡ ಕಾಡಿನಿಂದ ಹೊರಗೆ ಬಂದಿರಲಿಲ್ಲ. ಜನರಿಗೆ ಈ ಬಗ್ಗೆ ತಿಳಿಯುವ ಕುತೂಹಲ ಆಗಲೂ ತಣಿದಿರಲಿಲ್ಲ. ಅಲ್ಲಿ ಸೇರಿದ್ದ ಜನರು ಕತ್ತಲಾವರಿಸಿದರೂ, ಆ ಜಾಗ ಬಿಟ್ಟು ಕದಲಲು ಸಿದ್ಧರಿರಲಿಲ್ಲ.
ಎಸ್‌ಐಟಿ ತಂಡವು ಸ್ಥಳದಿಂದ ನಿರ್ಗಮಿಸಿದ ಬಳಿಕವೂ ಜನರ ಚರ್ಚೆ ಕೊನೆಯಾಗಿರಲಿಲ್ಲ. ‘ಸಿಕ್ಕ ಅವಶೇಷವನ್ನು ಏನು ಮಾಡುತ್ತಾರೆ. ಅದು ಯಾರದು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವೇ? ಮುಂದಿನ ತನಿಖೆ ಯಾವ ರೀತಿ ಸಾಗಲಿದೆ’ ಎಂಬ ಕುರಿತು, ಜನ ತಮ್ಮದೇ ಧಾಟಿಯ ಚರ್ಚೆಯಲ್ಲಿ ತೊಡಗಿದ್ದರು.
ನೇತ್ರಾವತಿ ಸೇತುವೆಯುದ್ದಕ್ಕೂ ಜನರ ಸಾಲು ಸಂಜೆ 7.30ರವರೆಗೂ ಮುಂದುವರಿದ ಮಹಜರು ಅಧಿಕಾರಿಗಳ ತಂಡ ನಿರ್ಗಮಿಸಿದ ಬಳಿಕವೂ ನಿಲ್ಲದ ಚರ್ಚೆ
‘ಪರದೆ ಕಟ್ಟಿದರು’
ನದಿಯ ಇನ್ನೊಂದು ಬದಿಯಲ್ಲಿ ನಿಂತು ಮಾಧ್ಯಮದವರು ಜೂಮ್ ಲೆನ್ಸ್ ಬಳಸಿ ಮೃತದೇಹದ ಅವಶೇಷ ಪತ್ತೆಯಾದ ಸ್ಥಳದ ಬೆಳವಣಿಗೆಯನ್ನು ಚಿತ್ರೀಕರಿಸುತ್ತಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆಯೇ ಎಸ್‌ಐಟಿ ಸಿಬ್ಬಂದಿ ಆ ಸ್ಥಳಕ್ಕೆ ಹಸಿರು ಪರದೆಯನ್ನು ಕಟ್ಟಿ ಅಲ್ಲಿ ನಡೆಯುವ ದೃಶ್ಯ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.