
ಮಂಗಳೂರು: ‘ಐರೋಪ್ಯ ಒಕ್ಕೂಟದ ಜೊತೆಗಿನ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಜಾರಿಗೆ ಬರುವ ನಿರೀಕ್ಷೆ ಇದ್ದು, ಇದರಿಂದ ಮಂಗಳೂರಿನಲ್ಲೂ ಮೀನುಗಾರಿಕೆ, ವ್ಯಾಪಾರ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಬಹಳಷ್ಟು ಅವಕಾಶಗಳು ತೆರೆದುಕೊಳ್ಳಲಿವೆ. ಈ ನಿಟ್ಟಿನಲ್ಲಿ ಭಾಗಿದಾರರ ಜೊತೆ ಸಂವಾದ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಮತ್ತು ದಕ್ಷಿಣ ಏಷ್ಯಾದ ಹೂಡಿಕೆಯ ಉಪ ವ್ಯಾಪಾರ ಆಯುಕ್ತ ಚಂದ್ರು ಅಯ್ಯರ್ ಹೇಳಿದರು.
ಮಂಗಳೂರಿನ ವಿವಿಧ ಶೈಕ್ಷಣಿಕ ಹಾಗೂ ವಾಣಿಜ್ಯ ಸಂಸ್ಥೆಗಳ ಜೊತೆ ಸಂವಾದ ನಡೆಸಿದ ಬಳಿಕ, ಗುರುವಾರ ಸಂಜೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸಮಗ್ರ ಆರ್ಥಿಕ ಹಾಗೂ ವ್ಯಾಪಾರ ಒಪ್ಪಂದದಿಂದ (ಸಿಇಟಿಎ) ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಅಪರೂಪದ ಖನಿಜಗಳು ಮುಂತಾದ ಕೆಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ವಹಿವಾಟು ಬಹಳಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಒಪ್ಪಂದವು ಜಾರಿಗೆ ಬರುವ ಎರಡು ವರ್ಷ ಮುನ್ನವೇ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರವು 44 ಶತಕೋಟಿ ಡಾಲರ್‌ನಿಂದ 47 ಶತಕೋಟಿ ಡಾಲರ್‌ಗೆ ಹೆಚ್ಚಳವಾಗಿದೆ. ಶೇ 99ರಷ್ಟು ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಅಥವಾ ಶೂನ್ಯವಾದ ಬಳಿಕ ಈ ಪ್ರಮಾಣವು ದ್ವಿಗುಣ ಅಥವಾ ಅದಕ್ಕೂ ಹೆಚ್ಚು ಏರಿಕೆ ಕಾಣುವ ಸಾಧ್ಯತೆ ಇದೆ’ ಎಂದರು.
ಎರಡೂ ಸರ್ಕಾರಗಳು 10 ವರ್ಷಗಳ ಮುನ್ನೋಟವನ್ನಿಟ್ಟುಕೊಂಡು ಈಗಾಗಲೇ ‘ವಿಷನ್ 2035’ ಒಪ್ಪಂದ ಮಾಡಿಕೊಂಡಿವೆ. ಪರಸ್ಪರ ರಾಷ್ಟ್ರಗಳ ಯುವ ವೃತ್ತಿಪರರನ್ನು ಆಕರ್ಷಿಸಲು ವಾರ್ಷಿಕ ಮೂರು ಸಾವಿರ ಯುವಕರಿಗೆ ವೀಸಾ ನೀಡುವ ವಿಶೇಷ ಯೋಜನೆ ಎರಡು ವರ್ಷಗಳಿಂದ ಜಾರಿಯಲ್ಲಿದೆ. ಇದರಡಿ ಭಾರತದಿಂದ ಬ್ರಿಟನ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಅಲ್ಲಿಂದ ಭಾರತಕ್ಕೆ ಬರುವ ವೃತ್ತಿಪರರ ಸಂಖ್ಯೆಯೂ ಹೆಚ್ಚಾಗಬೇಕು ಎಂಬುದು ನಮ್ಮ ನಿರೀಕ್ಷೆ. ಈ ಉದ್ದೇಶದಿಂದ ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಬ್ರಿಟನ್‌ನಲ್ಲಿ ಹಾಗೂ ಅಲ್ಲಿನ ಹೂಡಿಕೆಯ ಅವಕಾಶಗಳ ಬಗ್ಗೆ ಭಾರತದಲ್ಲಿ ರೋಡ್ ಶೋಗಳನ್ನು ಹಮ್ಮಿಕೊಳ್ಳುವ ಚಿಂತನೆ ಇದೆ. ಮಂಗಳೂರಿನ ಐಸ್‌ಕ್ರೀಂಗಳು, ಮಂಗಳೂರು ಬನ್, ಮೀನಿನ ಖಾದ್ಯಗಳು, ಅಡಿಕೆ ಮತ್ತು ಗೋಡಂಬಿ ಬ್ರಿಟನ್‌ನಲ್ಲೂ, ಅಲ್ಲಿನ ಆಹಾರ ಉತ್ಪನ್ನಗಳು ಮಂಗಳೂರಿನಲ್ಲೂ ಲಭಿಸುವಂತಾಗಬೇಕು. ರಾಜ್ಯ ಸರ್ಕಾರವು ‘ಬಿಯಾಂಡ್ ಬೆಂಗಳೂರು’ ಯೋಜನೆಗೆ ಒತ್ತು ನೀಡುತ್ತಿರುವುದರಿಂದ ಮಂಗಳೂರಿನಂಥ ನಗರಕ್ಕೆ ಹೆಚ್ಚಿನ ಅನುಕೂಲವಾಗುವುದು ಖಚಿತ ಎಂದರು.
ಬ್ರಿಟನ್‌ನ ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ದೇಶದಲ್ಲಿ ಹಾಗೂ ರಾಜ್ಯದ ಕೆಲವೆಡೆ ಕೇಂದ್ರಗಳನ್ನು ಆರಂಭಿಸಿವೆ. ಅನೇಕ ಸಂಸ್ಥೆಗಳು ಭಾರತದಲ್ಲಿ ಶಾಲೆಗಳನ್ನು ಆರಂಭಿಸಲು ಮುಂದಾಗಿವೆ. ಮಂಗಳೂರಿನಲ್ಲೂ ಅತ್ಯುತ್ತಮ ಎನ್ನಬಹುದಾದ ಶಿಕ್ಷಣ ಸಂಸ್ಥೆಗಳಿದ್ದು ಬ್ರಿಟನ್ ಹಾಗೂ ಇಲ್ಲಿನ ಶಿಕ್ಷಣ ಸಂಸ್ಥೆಗಳು ಜೊತೆಗೂಡಿ ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರೆ ಎರಡೂ ದೇಶಗಳಿಗೆ ಅನುಕೂಲವಾಗಲಿದೆ ಎಂದು ಅಯ್ಯರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.