ಮಂಗಳೂರು: ‘ಕಲೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಕಸುಬಿನ ಜತೆಗೆ ಗಳಿಸಿದ ಸಂಪತ್ತನ್ನು ಕಲೆಗೂ ಮೀಸಲಿರಿಸಿ ಸುಂದರ ಸಮಾಜ ಕಟ್ಟಬೇಕಿದೆ’ ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಉರ್ವದ ನಾಟ್ಯಾರಾಧನಾ ಕಲಾಕೇಂದ್ರ ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಾಟ್ಯಾರಾಧನಾ ತ್ರಿಂಶೋತ್ಸವ’ದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜನ ಭ್ರಷ್ಟರಾಗುವ ಇಂದಿನ ಸಂದರ್ಭದಲ್ಲಿ ಅವರ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯ ದಾಳಿಗಳು ಆಗುತ್ತಿರುತ್ತವೆ. ಇದರಿಂದ ಕಲೆ, ಮನರಂಜನೆಯ ವ್ಯತ್ಯಾಸವೇ ತಿಳಿಯದಂತೆ ಆಗುತ್ತಿದೆ. ಇದನ್ನು ನಿವಾರಿಸಲು ಹಿರಿಯರು ಕಟ್ಟಿ ಬೆಳೆಸಿದ ಕಲೆ, ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಗಟ್ಟಿಯಾಗಿ ಬೇರೂರಿಸಿಕೊಂಡು ಉತ್ತಮ ಸಮಾಜವನ್ನು ರೂಪಿಸಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು’ ಎಂದು ಅವರು ಹೇಳಿದರು.
ಭರತನಾಟ್ಯಕ್ಕೆ ಸಂಬಂಧಿಸಿ ಸಾಹಿತ್ಯ ತೆಲುಗು, ತಮಿಳಿನಲ್ಲಿ ಇರುವುದರಿಂದ ನಮ್ಮವರಿಗೆ ಅರ್ಥವಾಗುತ್ತಿರಲಿಲ್ಲ. ಇದನ್ನು ‘ನೃತ್ಯಾಮೃತ’ದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ಅವರು ನಿವಾರಿಸಿದ್ದಾರೆ. ಇದು ಶ್ಲಾಘನೀಯ. ನಾಟ್ಯಾರಾಧನೆ, ಯಕ್ಷಾರಾಧನೆ ಮೂಲಕ ಹಲವು ಶಿಷ್ಯರಿಗೆ ಅವರು ಮಾರ್ಗದರ್ಶನ ಮಾಡಿದ್ದಾರೆ ಎಂದರು.
ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್, ವಿದ್ವಾನ್ ಚಂದ್ರಶೇಖರ ನಾವಡ ಅವರಿಗೆ ಗುರುವಂದನೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಧ್ವನಿಮುದ್ರಿತ ‘ನೃತ್ಯಾಮೃತ’ವನ್ನು ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಬಿಡುಗಡೆ ಮಾಡಿದರು. ಕಲಾಪೋಷಕರಾದ ದಿವಾಣ ಗೋವಿಂದ ಭಟ್, ಶಕುಂತಳಾ ರಮಾನಂದ ಭಟ್, ವೆಂಕಟೇಶ್ ಹೆಬ್ಬಾರ್, ಹಿರಿಯ ವಿದ್ಯಾರ್ಥಿನಿ ವಿದುಷಿ ಸುಶ್ಮಿತಾ ರಾವ್, ವಿದುಷಿ ಸುಮಂಗಲಾ ರತ್ನಾಕರ್, ರತ್ನಾಕರ್ ರಾವ್ ಭಾಗವಹಿಸಿದ್ದರು. ಗಣೇಶ್ ಅಮೀನ್ ಸಂಕಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಶಿರಾಜ್ ಕಾವೂರು ನಿರೂಪಿಸಿದರು.
ವಿದುಷಿ ಭವ ಅಮೀನ್ ಸಂಕಮಾರ್, ವೃಂದಾ ರಾವ್, ಸಮನ್ವಿತಾ ರಾವ್, ಧರಿತ್ರಿ ಭಿಡೆ, ತನ್ವಿ ವಿ.ಬೋಳೂರು, ದೀಕ್ಷಾ ಸಿ.ಭಟ್ ಹಾಗೂ ಭೂಮಿಕಾ ಎಂ. ಅವರು ಭಾವಿಕಾವನ್ನು ಪ್ರಸ್ತುತಿಪಡಿಸಿದರು. ನಟುವಾಂಗದಲ್ಲಿ ವಿದುಷಿ ಸುಮಂಗಲಾ ರತ್ನಾಕರ್, ಗಾಯನದಲ್ಲಿ ಹರ್ಷಿತಾ ವಿದ್ಯಾ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್, ಕೊಳಲಿನಲ್ಲಿ ಕೃಷ್ಣ ಕಶ್ಯಪ್ ಸಹಕರಿಸಿದರು. ಮೈಸೂರಿನ ವಿದುಷಿ ಶ್ರೀವಿದ್ಯಾ ಶಶಿಧರ್ ಅವರಿಂದ ಕೌತ್ವಂ ಪ್ರಸ್ತುತಿಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.