ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಕಾಪು ಚಡಾವು ಬಳಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಗುಡ್ಡ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 17 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಚಾರ್ಮಾಡಿ ಮೂಲಕ ಮಂಗಳೂರು ಕಡೆ ಸಾಗುತ್ತಿದ್ದ ಮಿನಿ ಬಸ್ ಅವಘಡಕ್ಕೀಡಾಗಿದೆ.
ಅಪಘಾತದಲ್ಲಿ ಬೆಂಗಳೂರು ಮೂಲದ ವೆಂಕಟಸ್ವಾಮಪ್ಪ (45) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಕೀರ್ತನಾ (15), ತನಿಷ್ಕಾ (7), ಯಶವಂತ (21), ರೂಪಾ (37), ಹಂಸಾ (39), ತನುಶ್ರೀ (21), ವಿಕಾಸ್(13), ಅಖಿಲಾ (23), ರತ್ನಮ್ಮ (47), ಬಾಲಕೃಷ್ಣ (33), ಯಲ್ಲಮ್ಮ (62), ರೂಪಾ (33), ಪ್ರೀತಮ್ (11) ಯಲ್ಲಮ್ಮ, ಪಾವನಾ, ಮಂಜುಳಾ, ಬಿಂದುಶ್ರೀ, ಮಿಥುನ್ ಅವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅಪಘಾತವಾದ ತಕ್ಷಣ ಸ್ಥಳೀಯರಾದ ಸಚಿನ್ ಭಿಡೆ ಹಾಗೂ ಜಗದೀಶ ನಾಯ್ಕ ಸ್ಥಳಕ್ಕೆ ಧಾವಿಸಿ ಇತರ ವಾಹನ ಚಾಲಕರ ಸಹಕಾರದಿಂದ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಬಸ್ ಗುಡ್ಡ ಏರಿದ ಸ್ಥಳದಲ್ಲಿ ಖಾಸಗಿ ವಿದ್ಯುತ್ ಲೈನ್‌ನ ಕಂಬ ಇದ್ದು, ಬಸ್ ಅದಕ್ಕೆ ಬಡಿದು ನಿಂತಿದೆ. ಕಂಬ ಇರದಿದ್ದರೆ ಕೆಳಭಾಗದಲ್ಲಿ ಹರಿಯುವ ಮೃತ್ಯುಂಜಯ ನದಿಗೆ ಮಿನಿ ಬಸ್ ಬೀಳುವ ಸಾಧ್ಯತೆ ಇತ್ತು. ಕಳೆದ ವರ್ಷ ಇದೇ ಸ್ಥಳದಿಂದ ಸುಮಾರು 50 ಮೀ ಕೆಳಭಾಗದಲ್ಲಿ ರಿಕ್ಷಾ ನದಿಗೆ ಉರುಳಿ ಮಹಿಳೆ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು. ಬಳಿಕ ಇಲ್ಲಿ ಮಣ್ಣಿನ ದಿಬ್ಬ ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.