ADVERTISEMENT

ಮಂಗಳೂರಿನಿಂದ ಬೆಂಗಳೂರು ಸೇರಿದಂತೆ ಹಲವೆಡೆಗೆ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಮೇ 2020, 4:51 IST
Last Updated 19 ಮೇ 2020, 4:51 IST
ಮಂಗಳೂರು ಬಸ್ ನಿಲ್ದಾಣದ ಎದುರು ಪ್ರಯಾಣಿಕರು
ಮಂಗಳೂರು ಬಸ್ ನಿಲ್ದಾಣದ ಎದುರು ಪ್ರಯಾಣಿಕರು   

ಮಂಗಳೂರು: ನಗರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಊರುಗಳಿಗೆ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಿದೆ. ಮಂಗಳವಾರ ಬೆಳಿಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ 29 ಪ್ರಯಾಣಿಕರನ್ನು ಹೊತ್ತು ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸಿದೆ.

ಇತರೆ ಜಿಲ್ಲೆಗಳಿಗೆ ಸಂಜೆ 7 ಗಂಟೆಯೊಳಗೆ ಎಲ್ಲ ಬಸ್ಸು ತಲುಪಲು ವ್ಯವಸ್ಥೆ ಮಾಡಲಾಗಿದ್ದು 11 ಗಂಟೆಯಿಂದ ಯಾವುದೇ ಬಸ್‌ಗಳು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವುದಿಲ್ಲ. ಹಾಗೆಯೇ ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ,10 ವರ್ಷದ ಕೆಳಗಿನವರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ.

ಜಿಲ್ಲೆಯೊಳಗಡೆಯೂ ಪ್ರಯಾಣಿಕರ ಲಭ್ಯತೆಯನ್ನು ಆಧರಿಸಿ, ವಿವಿಧ‌ ಊರುಗಳಿಗೆ ಬಸ್‌ ಓಡಿಸಲಾಗುತ್ತಿದೆ. ಇತರೆ ಜಿಲ್ಲೆಗಳಿಗೆ ಹಂತ ಹಂತವಾಗಿ ಬಸ್‌ ಸಂಚಾರ ಆರಂಭ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ADVERTISEMENT

ಮಂಗಳೂರಿನಿಂದ 45 ಬಸ್‌ಗಳು ನಾಲ್ಕು ಜಿಲ್ಲೆಗಳಿಗೆ ಹೊರಟಿದ್ದು, ನಾಲ್ಕು ಜಿಲ್ಲೆಗಳಿಗೆ ಬಸ್‌ ಸಂಚಾರ ಆರಂಭವಾದ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಜನರು ಬರುತ್ತಿದ್ದಾರೆ.

ಬಸ್ ಟಿಕೆಟ್‌ಗಾಗಿ ಕ್ಯೂ ನಿಂತಿದ್ದು, ಸುರಕ್ಷಿತ ಅಂತರ ಕಾಪಾಡಲು ಒಂದು ಬಸ್‌ನಲ್ಲಿ 30 ಮಂದಿ ಪ್ರಯಾಣಿಸಲು ಅವಕಾಶ‌ ನೀಡಲಾಗಿದೆ. 30 ಮಂದಿ ಬಂದಲ್ಲಿ ಮಾತ್ರವೇ ಬಸ್‌ ಸಂಚಾರ ಆರಂಭಿಸಲಾಗುವುದು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡಿನಲ್ಲೂ ಬಸ್ ಆರಂಭ

ಕೇರಳದಲ್ಲಿ ಬಸ್ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪ್ರಯಾಣ ದರ ಏರಿಕೆಯೊಂದಿಗೆ ಬಸ್ ಗಳು ಓಡಾಟ ನಡೆಸಲಿವೆ.
ಕನಿಷ್ಠ ದರವನ್ನು ಎಂಟು ರೂಪಾಯಿಯಿಂದ 12 ರೂಪಾಯಿಗೆ ಹೆಚ್ಚಿಸಲಾಗಿದೆ. ಬುಧವಾರದಿಂದ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಗಳಲ್ಲಿ ಈ ಹಿಂದೆ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೆ, ಇದೀಗ ಅದಕ್ಕೆ ಕಡಿವಾಣ ಹಾಕಲಾಗಿದೆ. ನಿಗದಿಯಂತೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಒಂದು ಸಂದರ್ಭದಲ್ಲಿ ಪ್ರಯಾಣಿಸಲು ಅವಕಾಶ ಇರಲಿದೆ.

ಇನ್ನು ಜಿಲ್ಲೆಯ ಒಳಗಡೆ ಮಾತ್ರ ಬಸ್ಸು ಮಾತ್ರ ಸಂಚಾರಕ್ಕೆ ಕೇರಳದಲ್ಲಿ ಅವಕಾಶ ಇರಲಿದೆ. ಕಾಸರಗೋಡು ಜಿಲ್ಲೆಯ ಬಸ್ ಗಳು ಕೇವಲ ಜಿಲ್ಲೆಯಲ್ಲಿ ಮಾತ್ರವೇ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಇನ್ನು ಬಸ್ ಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಲೇಬೇಕಾಗಿದೆ. ಸರಕಾರ ಹೊರಡಿಸಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ.

ಇನ್ನು ಇದರೊಂದಿಗೆ ಕ್ಷೌರದಂಗಡಿ ಹಾಗೂ ಬ್ಯೂ ಟಿ ಪಾರ್ಲರ್ ಗಳನ್ನು ತೆರೆಯಲು ಕೇರಳದಲ್ಲಿ ಅನುಮತಿ ನೀಡಲಾಗಿದೆ. ಆದರೆ ಹವಾ ನಿಯಂತ್ರಕ (ಎಸಿ) ಬಳಸುವಂತಿಲ್ಲ ಎಂದು ಆದೇಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.