ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲಾಗಿದ್ದು ಶೇ 10ರಷ್ಟು ಏರಿಕೆಗೆ ನಿರ್ಧರಿಸಲಾಗಿದೆ.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಉದ್ದಿಮೆ ಪರವಾನಿಗಿ ಇಲ್ಲದೆ ವ್ಯಾಪಾರ ನಡೆಸುವವರನ್ನು ಪತ್ತೆ ಹಚ್ಚಿ ಎಲ್ಲರನ್ನೂ ಪರವಾನಗಿ ವ್ಯಾಪ್ತಿಯೊಳಗೆ ತರಬೇಕು ಎಂದು ರಾಜೇಶ್ ನಾಯಕ್ ಆಗ್ರಹಿಸಿದರು.
ಮುಖ್ಯಾಧಿಕಾರಿ ಇಂದು ಎಂ.ಉತ್ತರಿಸಿ ಸಮಾಜ ಕಾರ್ಯ ವಿದ್ಯಾರ್ಥಿಗಳ ಮೂಲಕ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಲಾಗಿದೆ. ಅಂಥವರಿಗೆ ನೋಟಿಸ್ ನೀಡಿ ಪರವಾನಗಿ ಪಡೆಯಲು ಸೂಚಿಸಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಸಿದರು. ಮಹಾವೀರ ಕಾಲೇಜು - ಕೋಟೆಬಾಗಿಲು ಸಂಪರ್ಕ ರಸ್ತೆ ಹೊಂಡಮಯವಾಗಿದ್ದು, ಮರು ಡಾಂಬರೀಕರಣಗೊಳಿಸಬೇಕು ಎಂದು ರೂಪಾ ಸಂತೋಷ್ ಶೆಟ್ಟಿ, ಪುರಂದರ ದೇವಾಡಿಗ ಒತ್ತಾಯಿಸಿದರು. ಪ್ರತಿ ವಾರ್ಡ್‌ನಲ್ಲಿ ರಸ್ತೆ ದುರಸ್ತಿ, ಇತರ ತುರ್ತು ಕಾಮಗಾರಿಗೆ ₹ 10 ಲಕ್ಷ ಮೀಸಲಿಡುವುದಾಗಿ ಉಪಾಧ್ಯಕ್ಷ ನಾಗರಾಜ ಪೂಜಾರಿ ತಿಳಿಸಿದರು.
ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣಗಳ ಅಂಗಡಿ ಕೋಣೆಗಳ ಟೆಂಡರ್‌ನಲ್ಲಿ ಹೊರಗಿನವರು ಮಧ್ಯ ಪ್ರವೇಶಿಸಿ ಬಿಡ್ಡುದಾರರ ಮೇಲೆ ಒತ್ತಡ ಹೇರಿ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ. ಬಾಡಿಗೆ ಮೊತ್ತ ಹರಾಜಿನಲ್ಲಿಯೂ ತಾರತಮ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪುರಸಭೆ ವ್ಯಾಪ್ತಿಯವರಿಗೆ ಮಾತ್ರ ಹರಾಜಿನಲ್ಲಿ ಪಾಲ್ಗೊಳ್ಳುವ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಪುರಸಭೆಗೆ ನೂತನ ಸ್ಥಾಯಿ ಸಮಿತಿಯನ್ನು ರಚಿಸಿದ್ದು, ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸ್ವಾತಿ ಪ್ರಭು ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.