ADVERTISEMENT

ಮೊದಲೇ ಮಾಹಿತಿ ಕ್ರೋಢೀಕರಿಸಿ–ಸಮೀಕ್ಷೆಗೆ ಸಹಕರಿಸಿ

ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ: ಮಾಹಿತಿ ಕಾರ್ಯಾಗಾರದಲ್ಲಿ ಯು.ಟಿ.ಖಾದರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:40 IST
Last Updated 18 ಸೆಪ್ಟೆಂಬರ್ 2025, 4:40 IST
ಮಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಮಂಗಳೂರು: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇದೇ 22ರಿಂದ ಅ. 7ರವರೆಗೆ  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಿದೆ. ಸಮಿಕ್ಷಾದಾರರು ಆನ್‌ಲೈನ್‌ನಲ್ಲೇ ದತ್ತಾಂಶಗಳನ್ನು ಭರ್ತಿ ಮಾಡುವುದರಿಂದ, ಅದಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಕುಟುಂಬದ ಸದಸ್ಯರು ಮೊದಲೇ ಕ್ರೋಢೀಕರಿಸಿ ಇಟ್ಟುಕೊಳ್ಳುವ ಮೂಲಕ ಸಹಕರಿಸಬೇಕು’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.

ಸಮೀಕ್ಷೆಯ ಬಗ್ಗೆ ಜಿಲ್ಲೆಯ ಶಾಸಕರು, ವಿವಿಧ ಧರ್ಮ, ಜಾತಿ ಹಾಗೂ ಸಮುದಾಯಗಳ ಮುಖಂಡರಿಗೆ ಮಾಹಿತಿ ನೀಡುವ ಸಲುವಾಗಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

‘ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳ ಹಾಗೂ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದವರ ಇ- ಕೆವೈಸಿ ಮಾಡಬೇಕಾಗುತ್ತದೆ. ಅದಕ್ಕಾಗಿ ಆಧಾರ್‌ ಕಾರ್ಡ್‌ ಜೊತೆ ಕುಟುಂಬದ ಯಾವುದಾದರೂ ಒಬ್ಬ ಸದಸ್ಯರ ಮೊಬೈಲ್ ಸಮಖ್ಯೆ ಜೋಡಣೆಯಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. 

ADVERTISEMENT

‘ಸಮೀಕ್ಷೆಗೆ ಪೂರ್ವಭಾವಿಯಾಗಿ ಪ್ರತಿ ಮನೆಗೂ ಸ್ಟಿಕ್ಟರ್ ಅಂಟಿಸಲಾಗಿದೆ. ಪ್ರತಿ ಕುಟುಂಬದ ಮಾಹಿತಿ ಭರ್ತಿ ಮಾಡಲು ಗಣತಿದಾರರಿಗೆ ಸುಮಾರು 1 ಗಂಟೆ ಹಿಡಿಯುತ್ತದೆ.  ಒಟ್ಟು 60 ಪ್ರಶ್ನೆಗಳ ಪ್ರಶ್ನಾವಳಿಯ ನಮೂನೆಯನ್ನುಆಶಾ ಕಾರ್ಯಕರ್ತೆಯರು ಮನೆ ಮನೆಗೆ ತಲುಪಿಸಲಿದ್ದಾರೆ. ಇದರಲ್ಲಿ ಆಯಾ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸೂಕ್ತ ಮಾಹಿತಿಯನ್ನು ಮೊದಲೇ ಭರ್ತಿ ಮಾಡಿಟ್ಟುಕೊಂಡರೆ, ಗಣತಿದಾರರು ಆ ಮಾಹಿತಿಯನ್ನು ಆನ್ಲೈನ್‌ನಲ್ಲಿ ಭರ್ತಿ ಮಾಡುವುದು ಸುಲಭವಾಗಲಿದೆ’ ಎಂದರು.

‘ಸಮೀಕ್ಷೆಯಲ್ಲಿ ಸಂಗ್ರಹಿಸುವ ದತ್ತಾಂಶವು ಕುಟುಂಬದ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಒಳಗೊಂಡಿದೆ. ಅದು ದುರ್ಬಳಕೆಯಾಗದು ಎಂಬ ಖಾತರಿ ಇದೆಯೇ. ಇದು ಸೋರಿಕೆ ಆದರೆ ಯಾರು ಹೊಣೆ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಶ್ನಿಸಿದರು.

‘ಸದ್ಯಕ್ಕೆ ದತ್ತಾಂಶ ಆಯೋಗದ ಸುಪರ್ದಿಯಲ್ಲೇ ಇರುತ್ತದೆ. ವಿಧಾನ ಮಂಡಲದಲ್ಲಿ ಸಮೀಕ್ಷೆಯ ವರದಿ ಮಂಡನೆ ಆದ ಬಳಿಕ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೋ ಬೇಡವೋ ಎಂಬುದನ್ನು ಸರ್ಕಾರವೇ ತೀರ್ಮಾನಿಸಲಿದೆ’ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್.ವಿ. ಸ್ಪಷ್ಟಪಡಿಸಿದರು. 

‘ಸಮೀಕ್ಷೆ ಕುರಿತು ಅನೇಕ ಗೊಂದಲಗಳಿವೆ. ಜನರಿಗೆ ಸರಿಯಾಗಿ ಮಾಹಿತಿಯನ್ನೇ ಒದಗಿಸದೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆದಿದೆ. ಕೆಲವರು ಇದನ್ನು ಹರಿದುಹಾಕಿದ್ದಾರೆ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ದೂರಿದರು. 

‘ಜಿಲ್ಲೆಯ ಬಂಟ ಸಮುದಾಯದ ಕೆಲವರು  ನಾಡವ ಎಂದೂ ಗುರುತಿಸಿಕೊಂಡಿದ್ದಾರೆ. ಆದರೆ, ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ಬಂಟರ ಹೆಸರು ಮಾತ್ರ ಇದೆ. ಇದರಿಂದ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಸಂಖ್ಯೆ ವ್ಯತ್ಯಾಸ ಆಗುತ್ತದೆ’ ಎಂದು ಬಂಟರ ಯಾನೆ ನಾಡವರ ಮಾತೃತ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಆಕ್ಷೇಪಿಸಿದರು.

‘ಬಂಟ ಜಾತಿಯನ್ನು ನಮೂದಿಸಿ ಜಾತಿಯ ಕುರಿತು ಬಳಸುವ ಇತರ ಹೆಸರುಗಳನ್ನು ನಮೂದಿಸಲು ಅವಕಾಶವಿದ್ದು, ಗೊಂದಲಕ್ಕೆ ಅವಕಾಶ ಇಲ್ಲ’ ಎಂದು ಆಯೋಗದ ಅಧಿಕಾರಿ ಸಮಜಾಯಿಷಿ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉಪಜಾತಿ  ನಮೂದಿಸಲು ಅವಕಾಶವಿಲ್ಲ. ಇತರೆ ಹಿಂದುಳಿದ ವರ್ಗಗಳು ಮಾತ್ರ ಉಪ ಜಾತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಸಮುದಾಯದವರು ಗೊಂದಲಕ್ಕೆ ಒಳಗಾಗಬೇಕಿಲ್ಲ. ಕೇಂದ್ರ ಸರ್ಕಾರ ಅಧಿಸೂಚಿತ ಪಟ್ಟಿಯಲ್ಲಿರುವಂತೆಯೇ  ಜಾತಿಯ ಹೆಸರನ್ನು ನಮೂದಿಸಬೇಕು’ ಎಂದು  ಆಯೋಗದ ಕಾರ್ಯದರ್ಶಿ ಉರ್ಮಿಳಾ ಬಿ. ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೈನ ಸಮುದಾಯದ ಅನೇಕ  ಜಾತಿಗಳನ್ನು ಹೆಸರಿಸಲಾಗಿದೆ. ಇವೆಲ್ಲ ಜಾತಿಗಳಲ್ಲ. ಗೊಂದಲಕರವಾದ ಈ ಮಾಹಿತಿ ಕೈಬಿಡಿ ಎಂದು ಜೈನ ಸಮುದಾಯದ ಮುಖಂಡ ಪುಷ್ಪರಾಜ ಜೈನ್ ಒತ್ತಾಯಿಸಿದರು.

ಜೈನ ಸಮುದಾಯದಿಂದ ಬಂದ ಬೇಡಿಕೆ ಆಧರಿಸಿಯೇ ಈ ಹೆಸರುಗಳನ್ನು ಸೇರಿಸಲಾಗಿದೆ. ಇಲ್ಲಿ ಅಂತಹ ಜಾತಿಗಳು ಇಲ್ಲದಿದ್ದರೆ ಸಮೀಕ್ಷೆ ವೇಳೆ ಆ ಬಗ್ಗೆ ಮಾಹಿತಿ ನೀಡಬೇಕಾಗಿಲ್ಲ’ ಎಂದು ಅಧಿಕಾರಿ ತಿಳಿಸಿದರು. 

ಮಲೆಕುಡಿಯ, ಗಟ್ಟಿ, ತೀಯಾ, ಮನ್ಸ ಜಾತಿಗಳಿಗೆ ಸಂಬಂಧಿಸಿ ಗೊಂದಲಗಳ ಬಗ್ಗೆಯೂ ಆಯಾ ಸಮುದಾಯದ ಮುಖಂಡರು ಗಮನ ಸೆಳೆದರು.

ವಿಧಾನ ಪರಿಷತ್ ಸದಸ್ಯ  ಮಂಜುನಾಥ  ಭಂಡಾರಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರವಾಡೆ ವಿನಾಯಕ್ ಕಾರ್‌ಬಾರಿ,   ಮಂಗಳೂರು ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್ ಎಚ್‌.ಎನ್‌., ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮೊದಲಾದವರು ಭಾಗವಹಿಸಿದ್ದರು.

‘ಬ್ರಾಹ್ಮಣ ಕ್ರಿಶ್ಚಿಯನ್‌– ಇದು ಯಾವ ಜಾತಿ’

ಬ್ರಾಹ್ಮಣ ಕ್ರಿಶ್ಚಿಯನ್‌ ದೇವಾಂಗ  ಕ್ರಿಶ್ಚಿಯನ್‌ ಎಂಬ ಹೆಸರುಗಳು ಉಪ ಜಾತಿಯ ಪಟ್ಟಿಯಲ್ಲಿವೆ.  ಕ್ರಿಶ್ಚಿಯನ್  ವ್ಯಕ್ತಿ ಬ್ರಾಹ್ಮಣನಾಗಲು ಹೇಗೆ ಸಾಧ್ಯ. ಇಲ್ಲದ ಜಾತಿಗಳ ಹೆಸರನ್ನು ಸೇರಿಸಿ  ಸುಮ್ಮನೆ ಗೊಂದಲ ಸೃಷ್ಟಿಸುವುದು ಏಕೆ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಶ್ನಿಸಿದರು.  ‘ಈ ಹಿಂದೆ ಸಮೀಕ್ಷೆಗೆ ಬಳಸಲಾದಗಿದ್ದ ಜಾತಿಗಳ ಹೆಸರನ್ನೇ ಈ ಸಮೀಕ್ಷೆಗೂ ಬಳಸಿದ್ದೇವೆ.  ಬೇರೆ ಜಿಲ್ಲೆಗಳಲ್ಲಿ  ಬೇಡಿಕೆ ಬಂದಿದ್ದರಿಂದ ಕೆಲವು ಜಾತಿಗಳ ಹೆಸರನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು. ‘ಈ ಆಕ್ಷೇಪವನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಅಂತಹ ಜಾತಿಗೆ ಸೇರದವರು ಅದನ್ನು ಭರ್ತಿ ಮಾಡದಿದ್ದರೆ ಆಯಿತು’ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ ಸಮಜಾಯಿಷಿ ನೀಡಿದರು. 

‘ಲಭ್ಯವಿಲ್ಲದವರಿಗೆ ಮತ್ತೊಮ್ಮೆ ಅವಕಾಶ’

ತರಬೇತಿ ಪಡೆದ ಶಿಕ್ಷಕರು ಇದೇ 22ರಿಂದ ಅ. 7ರ ನಡುವೆ ಮನೆಗಳಿಗೆ ಭೇಟಿ ನೀಡಿ   ಮಾಹಿತಿ ಸಂಗ್ರಹಿಸಲಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದರೆ  ಅಂತಹ ಕುಟುಂಬದ  ಸದಸ್ಯಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ದೂ ಸಾಧ್ಯವಾಗದಿದ್ದರೆ  ಮನೆ ಮನೆ ಭೇಟಿ ಮುಗಿದ ಬಳಿಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ಮಾಹಿತಿ ಸಂಗ್ರಹಿಸಲಾಗುತ್ತದೆ.  ಯಾವುದೇ ರೀತಿಯ ಗೊಂದಲ ಆಕ್ಷೇಪ ಮಾಹಿತಿ ಸಲಹೆಗಳಿದ್ದಲ್ಲಿ ಆಯೋಗಕ್ಕೆ ಲಿಖಿತವಾಗಿ ಸಲ್ಲಿಸಬಹುದು ಎಂದು ಊರ್ಮಿಳಾ ಬಿ. ತಿಳಿಸಿದರು ಸಹಾಯವಾಣಿ: 8050770004 ಮಾಹಿತಿಗೆ  ವೆಬ್‌ಸೈಟ್ (https://kscbc.karnataka.gov.in) 

- ‘ಮೀನುಗಾರ ಮೊಗೇರರ ಹೆಸರು ಕೈಬಿಟ್ಟಿದ್ದೇಕೆ’ ‘

ಮೊಲ ಬೇಟೆಯನ್ನು ಕುಲಕಸುಬನ್ನಾಗಿ ಹೊಂದಿರುವ ದ.ಕ. ಜಿಲ್ಲೆಯ ಮೊಗೇರರು ಪರಿಶಿಷ್ಟ ಜಾತಿಯಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೊಗೇರರು ಮೀಗಾರ ಸಮುದಾಯದವರು. ಹಿಂದುಳಿದ ವರ್ಗಗಳ ಜಾತಿಗಳ ಪಟ್ಟಿಯಿಂದ ಮೀನುಗಾರರ ಮೊಗೇರರ ಹೆಸರನ್ನು ಇತ್ತೀಚೆಗೆ ಕೈಬಿಡಲಾಗಿದೆ. ಇದು ಏಕೆಂದು ಸ್ಪಷ್ಟಪಡಿಸಬೇಕು. ಈಗ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿ ಸೌಕರ್ಯವನ್ನು ಮತ್ತೆ ದುರ್ಬಳಕೆ ಮಾಡಿಕೊಳ್ಳುವ ಆತಂಕ ಎದುರಾಗಿದೆ’ ಎಂದು ಮೊಗೇರ ಸಮುದಾಯದ  ಮುಖಂಡ ಅಶೋಕ ಕೊಂಚಾಡಿ ಪ್ರಶ್ನಿಸಿದರು.  ‘ಈ ಹಿಂದೆ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದರಿಂದ  ಪರಿಶಿಷ್ಟ  ಜಾತಿಗಳಿಗೆ ಅನ್ಯಾಯವಾಗಿತ್ತು. ಕಾನೂನು ಹೋರಾಟದ ಮೂಲಕ  ಈ ಅನ್ಯಾಯ ಸರಿಪಡಿಸಲಾಗಿತ್ತು. ಈಗ ಮತ್ತೆ ಸಮಸ್ಯೆ ಎದುರಾಗಿದೆ’ ಎಂದರು. ‘ಈ ಬಗ್ಗೆ ಆಯೋಗದ ಗಮನಕ್ಕೆ ತರುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.