ಮಂಗಳೂರು: ನಗರದ ಜವಳಿ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಭೂಗತ ಪಾತಕಿ ಕಲಿ ಯೋಗೀಶನ ಸಹಚರರು ಎನ್ನಲಾದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಪಿಸ್ತೂಲ್, ರಿವಾಲ್ವರ್, ಸಜೀವ ಗುಂಡುಗಳು ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ‘ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಮೊಹಮ್ಮದ್ ಹನೀಫ್ ಅಲಿಯಾಸ್ ಅಲಿ ಮುನ್ನಾ (40) ಹಾಗೂ ಮುಡಿಪುವಿನ ಮೊಹಮ್ಮದ್ ರಫೀಕ್ ಅಲಿಯಾಸ್ ಮುಡಿಪು ರಫೀಕ್ (36) ಬಂಧಿತರು. ಆರೋಪಿಗಳಿಬ್ಬರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವಾಸವಿದ್ದಾರೆ. ಫಳ್ನೀರ್‌ನ ರಸ್ತೆಯಲ್ಲಿ ಇನ್ನೋವಾ ಕಾರಿನಲ್ಲಿ ತಿರುಗಾಡಿಕೊಂಡು ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದ ಖಚಿತ ಮಾಹಿತಿ ಆಧಾರದಲ್ಲಿ ಸಿಸಿಪಿ ಪೊಲೀಸರ ತಂಡ ಅವರನ್ನು ಬಂಧಿಸಿದೆ’ ಎಂದರು.
‘ಆರೋಪಿಗಳಿಂದ ಒಂದು ಪಿಸ್ತೂಲ್, ಒಂದು ರಿವಾಲ್ವರ್, 12 ಸಜೀವ ಮದ್ದುಗುಂಡುಗಳು, 42 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು, 3 ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ವತ್ತುಗಳ ಅಂದಾಜು ಮೌಲ್ಯ ₹ 10 ಲಕ್ಷ. ಅವರು 16 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು’ ಎಂದರು.
‘ಆರೋಪಿಗಳು ಈಚೆಗೆ ನಗರದ ಸೌರಾಷ್ಟ್ರ ಮಳಿಗೆಗೆ ತೆರಳಿ, ಮಾಲೀಕರಿಗೆ ಫೋನ್ ನೀಡಿ ಮಾತನಾಡುವಂತೆ ಸೂಚಿಸಿದ್ದರು. ಭೂಗತ ಪಾತಕಿ ಕಲಿ ಯೋಗೀಶ್ ಇಂಟರ್ನೆಟ್ ಕರೆ ಮೂಲಕ ಫೋನ್‌ನಲ್ಲಿ ಮಾತನಾಡಿ ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಬಂದರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳು ಕಾರ್ಕಳದ ಉದ್ಯಮಿ ದಿನೇಶ್ ಶೆಟ್ಟಿ ಹತ್ಯೆ ನಡೆಸಲು ಸಂಚು ರೂಪಿಸಿದ್ದು, ಈ ಸಲುವಾಗಿ ರಿವಾಲ್ವರ್ ಹಾಗೂ ಪಿಸ್ತೂಲ್ ಖರೀದಿಸಿದ್ದರು’ ಎಂದು ಮಾಹಿತಿ ನೀಡಿದರು.
‘ಪುತ್ತೂರಿನ ರಾಜಧಾನಿ ಜ್ಯುವೆಲ್ಲರಿಯಲ್ಲಿ ನಡೆದಿದ್ದ ಶೂಟೌಟ್, ಸಂಜೀವ ಶೆಟ್ಟಿ ಜವಳಿ ಅಂಗಡಿಯಲ್ಲಿ ನಡೆದಿದ್ದ ಶೂಟೌಟ್, ಕಾಸರಗೋಡು ಜಿಲ್ಲೆಯ ಬೇವಿಂಜೆಯ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರನ ಮನೆಯಲ್ಲಿ ನಡೆದಿದ್ದ ಶೂಟೌಟ್ ಸಹಿತ ಒಟ್ಟು 14 ಪ್ರಕರಣಗಳಲ್ಲಿ ಮೊಹಮ್ಮದ್ ಹನೀಫ್ ಆರೋಪಿ. ಆತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಗಳಲ್ಲಿ ವಾರಂಟ್ ಜಾರಿಯಲ್ಲಿದೆ. ಮೂಲ್ಕಿ ಠಾಣೆಯಲ್ಲಿ ದಾಖಲಾಗಿದ್ದ ಕಳವು, ಬರ್ಕೆ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ, ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪೊಕ್ಸೊ ಪ್ರಕರಣ, ನಗರ ಪೂರ್ವ ಠಾಣೆಯಲ್ಲಿ ದಾಖಲಾಗಿದ್ದ ದರೋಡೆಗೆ ಸಂಚು ಪ್ರಕರಣ, ಕೊಣಾಜೆ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ, ದೇವಸ್ಥಾನದಲ್ಲಿ ಕಳವು ಹಾಗೂ ಹಲ್ಲೆ ಪ್ರಕರಗಳು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಕಳವು ಹಾಗೂ ಮಂಜೇಶ್ವರದ ಕಣ್ಣೂರು ನಗರ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳಲ್ಲಿ ಮೊಹಮ್ಮದ್ ರಫೀಕ್ ಆರೊಪಿಯಾಗಿದ್ದ’ ಎಂದು ಮಾಹಿತಿ ನೀಡಿದ್ದರು.
ಸಿಸಿಬಿ ಎಸಿಪಿ ಗೀತಾ ಡಿ. ಕುಲಕರ್ಣಿ, ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಎಚ್.ಎಂ, ಸಿಸಿಬಿ ಪಿಎಸ್ಐಗಳಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್ಐ ಮೋಹನ್ ಕೆ.ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.