ADVERTISEMENT

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ಛಲವಾದಿ ನಾರಾಯಣ ಸ್ವಾಮಿ

ಉಪ್ಪಿನಂಗಡಿಯಲ್ಲಿ ಬಿಜೆಪಿ ಪಾದಯಾತ್ರೆ, ಜನಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:23 IST
Last Updated 15 ಫೆಬ್ರುವರಿ 2026, 2:23 IST
ಉಪ್ಪಿನಂಗಡಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ, ಜನಜಾಗೃತಿ ಸಭೆಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು
ಉಪ್ಪಿನಂಗಡಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ, ಜನಜಾಗೃತಿ ಸಭೆಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು   

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದ್ದು, ‌ಕಾಂಗ್ರೆಸ್ ಮುಖಂಡರು ಭ್ರಷ್ಟಾಚಾರ, ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

ವಿಕಸಿತ ಭಾರತ ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ (ವಿಬಿ-ಜಿ ರಾಮ್ ಜಿ) ಕಾಯ್ದೆಯ ಅರಿವು ಹಾಗೂ ಜನಜಾಗೃತಿ ಮೂಡಿಸಲು ಶನಿವಾರ ಉಪ್ಪಿನಂಗಡಿಯಲ್ಲಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಅವರು ಮಾತನಾಡಿದರು.

11 ವರ್ಷಗಳ ಹಿಂದೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಆದರೆ, ಈಗ ದೇಶದ 4ನೇ ಸ್ಥಾನಕ್ಕೆ ಬಂದು ನಿಂತಿದೆ. 2048ರಲ್ಲಿ ವಿಕಸಿತ ಭಾರತದ ಸೃಷ್ಟಿಯಾಗಬೇಕೆಂದು ನರೇಂದ್ರ ಮೋದಿ ಅವರ ಗುರಿಯಾಗಿದ್ದು, ಅದಕ್ಕಾಗಿ ಹಲವು ಬದಲಾವಣೆಗಳನ್ನು ತಂದಿದ್ದಾರೆ ಎಂದರು.

ADVERTISEMENT

ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ನಕಲಿ ಗಾಂಧಿಗಳಿಂದ ಮಹಾತ್ಮಗಾಂಧಿಯ ಹೆಸರಿಗೆ ಕಳಂಕ ಉಂಟಾಗಿದೆ. ಆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಕಾಯ್ದೆಯಲ್ಲಿ ಬದಲಾವಣೆ ತಂದು ಹೆಸರನ್ನು ಬದಲಾಯಿಸಲಾಗಿದೆ. ಈಗ ಈ ಕಾಯ್ದೆಯ ಹೆಸರು ವಿಬಿ-ಜಿ ರಾಮ್ ಜಿ ಎಂದು ಬದಲಾಯಿಸಲಾಗಿದ್ದು, ರಾಮನ ಮೇಲೆ ಭಕ್ತಿ ಇರುವವರು ಇದರಲ್ಲಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಗ್ರಾಮ ಸ್ವರಾಜ್ ಮೂಲಕ ದೇಶ ರಾಮ ರಾಜ್ಯವಾಗಬೇಕು ಎಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅದು ನರೇಂದ್ರ ಮೋದಿಯವರ ಕಾಲದಲ್ಲಿ ಈಡೇರಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಭಾರತ್ ಮಿಷನ್‌ ಯೋಜನೆಯಡಿ 12 ಕೋಟಿ ಶೌಚಾಲಯ ನಿರ್ಮಿಸಿದ್ದಾರೆ. ಜಲಜೀವನ್ ಮಿಷನ್‌ ಮೂಲಕ 15 ಕೋಟಿ ನಳ್ಳಿ ನೀರಿನ ಸಂಪರ್ಕ ಕೊಡಿಸಿ, 50 ಕೋಟಿ ಬ್ಯಾಂಕ್ ಖಾತೆಗಳನ್ನು ಜನಧನ್ ಯೋಜನೆ ಮೂಲಕ ಮಾಡಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಗಾಂಧೀಜಿ ಹೆಸರಿನಲ್ಲಿ ರಾಜಕೀಯ ಮಾತ್ರ ಮಾಡಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂಜೀವ ಮಠಂದೂರು ಮಾತನಾಡಿದರು.

ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪ್ರಸನ್ನ ಮಾರ್ತ, ಶಿವಕುಮಾರ್, ಆರ್.ಸಿ.ನಾರಾಯಣ, ಕರುಣಾಕರ, ವಿದ್ಯಾಗೌರಿ, ಅಪ್ಪಯ ಮಣಿಯಾಣಿ, ಚಂದಪ್ಪ ಮೂಲ್ಯ, ಚಂದ್ರಶೇಖರ ಬಪ್ಪಳಿಗೆ, ಜಯಂತ ಪೊರೋಳಿ, ಮುಕುಂದ ಬಜತ್ತೂರು, ವಿದ್ಯಾಧರ ಜೈನ್, ಗಂಗಾಧರ ಗೌಡ, ಸದಾನಂದ ನೆಕ್ಕಿಲಾಡಿ, ಉಷಾ ಮುಳಿಯ, ಉಮೇಶ್ ಶೆಣೈ ಭಾಗವಹಿಸಿದ್ದರು.

ಉಪ್ಪಿನಂಗಡಿ ಮೇಲ್ಸೇತುವೆ ಬಳಿಯಿಂದ ಪಾದಯಾತ್ರೆ ನಡೆಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.