ADVERTISEMENT

ರತ್ನತ್ರಯ ಕ್ಷೇತ್ರ: ಚಂದನ ಷಷ್ಠಿ ನೋಂಪಿ ಉದ್ಯಾಪನೆ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಸ್ವಾಮೀಜಿ ಮಂಗಲಪ್ರವಚನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:05 IST
Last Updated 14 ಸೆಪ್ಟೆಂಬರ್ 2025, 5:05 IST
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರ ಉಪಸ್ಥಿತಿಯಲ್ಲಿ ನಡೆದ ಚಂದನ ಷಷ್ಠಿ ನೋಂಪಿಯಲ್ಲಿ ಭಾಗವಹಿಸಿದ್ದ ಶ್ರಾವಕಿಯರು
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರ ಉಪಸ್ಥಿತಿಯಲ್ಲಿ ನಡೆದ ಚಂದನ ಷಷ್ಠಿ ನೋಂಪಿಯಲ್ಲಿ ಭಾಗವಹಿಸಿದ್ದ ಶ್ರಾವಕಿಯರು   

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಶನಿವಾರ ಚಂದನ ಷಷ್ಠಿ ನೋಂಪಿ ವಿಧಾನದ ಉದ್ಯಾಪನಾ ಕಾರ್ಯಕ್ರಮ  ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಮೂರೂ ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಚಂದ್ರಪ್ರಭ ತೀರ್ಥಂಕರರ ಪೂಜೆ, ಭಗವಾನ್ ಶಾಂತಿನಾಥ ಸ್ವಾಮಿ ಪೂಜೆ, ನವದೇವತೆಗಳ ಪೂಜೆ, ಪಂಚಪರಮೇಷ್ಠಿಗಳ ಪೂಜೆ, ಕ್ಷೇತ್ರಪಾಲಪೂಜೆ, ಪದ್ಮಾವತಿ ದೇವಿಪೂಜೆ, ಬ್ರಹ್ಮಯಕ್ಷ ಪೂಜೆ, ಭಗವಾನ್ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಸಲಾಯಿತು.

108 ಮಂತ್ರಪುಷ್ಟ ಅರ್ಚನೆ ಬಳಿಕ ಜಯಮಾಲಾ ಅರ್ಘ್ಯ ಅರ್ಪಿಸಲಾಯಿತು.

ಬಸದಿಯ ಪ್ರಧಾನ ಅರ್ಚಕ ಕೆ.ಜಯರಾಜ ಇಂದ್ರರ ನೇತೃತ್ವದಲ್ಲಿ ನವೀನ ಕುಮಾರ ಇಂದ್ರ ಮತ್ತು ಕೆ.ಮಹಾವೀರ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಧರ್ಮಸ್ಥಳದ ಸೌಮ್ಯಸುಭಾಶ್ ಮತ್ತು ಬಳಗದವರ ಜಿನ ಭಜನೆಗಳ ಸುಶ್ರಾವ್ಯ ಗಾಯನ ಗಮನಸೆಳೆಯಿತು. ಮೂಡುಬಿದಿರೆಯ ಸರ್ವೇಶ್ ಜೈನ್ ಮತ್ತು ಬಳಗದದಿಂದ ಜಿನಭಕ್ತಿ ಗೀತೆಗಳ ಗಾಯನ ನಡೆಯಿತು.

ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ್ ಬಳ್ಳಾಲ್, ಕೆ.ರಾಜವರ್ಮ ಬಳ್ಳಾಲ್, ಶ್ರೀನಾಥ್ ಬಳ್ಳಾಲ್, ವಿನಯಾ ಜೆ. ಬಳ್ಳಾಲ್, ವೈಶಾಲಿ ಬಳ್ಳಾಲ್, ಡಾ.ಪ್ರಿಯಾ ಬಳ್ಳಾಲ್, ವಿಜಯಾ ಬ್ಯಾಂಕ್ ನಿವೃತ್ತ ಮೇನೇಜರ್ ಎಂ. ಜಿನರಾಜ ಶೆಟ್ಟಿ ಮತ್ತು ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು.

18 ಮಂದಿ ಚಂದನ ಷಷ್ಠಿ ನೋಂಪಿ ವ್ರತಧಾರಿಗಳಲ್ಲಿ 8 ಮಂದಿ 6 ವರ್ಷಗಳನ್ನು ಪೂರೈಸಿದ್ದು ನೋಂಪಿ ಉದ್ಯಾಪನೆ ಮಾಡಿದರು.

ನೋಂಪಿ ವ್ರತಧಾರಿಗಳಾದ ಕುಂಡದಬೆಟ್ಟು ವಿನಯಮ್ಮ, ಸಬ್ರಬೈಲು ಸುಮಲತಾ ಜೀವಂಧರ ಚೌಟ ಮತ್ತು ಸುಜಾತ ಧನಕೀರ್ತಿ ಆರಿಗ ಧರ್ಮಸ್ಥಳ ಅವರು ಹೊರತಂದ ‘ಚಂದನ ಷಷ್ಠಿ ನೋಂಪಿ ವಿಧಾನ’ ಕೃತಿಯನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಕೃತಿಯನ್ನು ಎಲ್ಲರಿಗೂ ವಿತರಿಸಲಾಯಿತು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಸ್ವಾಗತಿಸಲಾಯಿತು

‘ನೋಂಪಿಗಳಿಂದ ಮೋಕ್ಷ ಪ್ರಾಪ್ತಿ’

ಕಠಿಣವ್ರತ ನಿಯಮಗಳ ಪಾಲನೆಯೊಂದಿಗೆ ಚಂದನ ಷಷ್ಠಿಯಂತಹ ಪವಿತ್ರ ನೋಂಪಿಗಳನ್ನು ಮಾಡಿದರೆ ನಮ್ಮ ಕರ್ಮಗಳ ನಿರ್ಜರೆಯಾಗಿ ರೋಗಗಳೂ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಹೆಚ್ಚಾಗಿ ನೋಂಪಿಗಳನ್ನು ಚಾತುರ್ಮಾಸವನ್ನು ಅವಧಿಯಲ್ಲಿ ಭಾದ್ರಪದ ಮಾಸದಲ್ಲಿ ಮಾಡುತ್ತಾರೆ. ಭಾದ್ರಪದ ಮಾಸ ಬಹಳ ಹಿತಕರವಾಗಿದ್ದು ಆಗ ನಾವು ಮಾಡಿದ ಭಾವನೆಗಳು ಭದ್ರವಾಗುತ್ತವೆ. ಪರಿಶುದ್ಧ ತನು ಮನದೊಂದಿಗೆ ವೃತ ನಿಯಮಗಳ ಪಾಲನೆಯೊಂದಿಗೆ ದೇವರು ಮತ್ತು ಗುರುಗಳ ಸೇವೆ ಆರಾಧನೆ ಮಾಡಬೇಕು. ಆಧುನಿಕತೆಯ ನೆಪದಲ್ಲಿ ಎಂದೂ ಅಪವಿತ್ರ ಅವಿನಯ ಮಾಡಬಾರದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಡಾ.ಕೆ.ಜಯಕೀರ್ತಿ ಜೈನ್ ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.