ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಉಪ್ಪಿನಂಗಡಿ ಕದಿಕ್ಕಾರು ಚಂದ್ರನಾಥ ಸ್ವಾಮಿ ಬಸದಿ ಪುನರ್ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಕೊನೆಯ ಹಂತದಲ್ಲಿದ್ದು, ಪಾರಂಪರಿಕ, ಆಕರ್ಷಕ ಶೈಲಿಯಲ್ಲಿ ರೂಪುಗೊಳ್ಳುತ್ತಿರುವ ಬಸದಿ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ.
4 ಶತಮಾನಗಳ ಐತಿಹ್ಯ ಹೊಂದಿರುವ ಬಸದಿಯ ಪುನರ್ ನಿರ್ಮಾಣ ಕಾರ್ಯ ವರ್ಷದ ಹಿಂದೆಯೇ ಆರಂಭಗೊಂಡಿದ್ದು, ಸರ್ಕಾರ ಮತ್ತು ಭಕ್ತರ ಸಹಕಾರದಿಂದ ಕಾಮಗಾರಿ ವೇಗ ಪಡೆದುಕೊಂಡು ಭರದಿಂದ ನಡೆಯುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸಲುವಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಗಾದ ಈ ಬಸದಿಯ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಪೂಜ ಕೈಂಕರ್ಯಗಳು ನಡೆಯುತ್ತಿವೆ.
ಪಾರಂಪರಿಕ ಶೈಲಿ: ಈ ಹಿಂದಿನ ಬಸದಿಯು ಶಿಲಾಮಯ ಬಸದಿಯಾಗಿದ್ದು, ನೂತನವಾಗಿ ನಿರ್ಮಾಣವಾಗುತ್ತಿರುವ ಬಸದಿಯ ಚಾವಣಿ ಮರದಿಂದ ನಿರ್ಮಾಣವಾಗುತ್ತಿದೆ. ಮೇಲ್ ಹೊದಿಕೆಯಾಗಿ ಎರಡು ಸ್ತರದಲ್ಲಿ ಹೆಂಚು ಅಳವಡಿಸಲಾಗುತ್ತಿದ್ದು, ಪಾರಂಪರಿಕ ಶೈಲಿಯಲ್ಲಿ ಬಸದಿ ನಿರ್ಮಾಣವಾಗುತ್ತಿದೆ.
ಕೆಂಪು ಮುರಕಲ್ಲಿನ ಗೋಡೆ: ಕರ್ಗಲ್ಲಿನ ಪಂಚಾಂಗದಲ್ಲಿ ಕೆಂಪು ಮುರಕಲ್ಲಿನಿಂದ ಆಕರ್ಷಕವಾಗಿ ಗೋಡೆ ನಿರ್ಮಾಣಗೊಂಡಿದೆ. ಎಲ್ಲ ಪ್ರವೇಶ ದ್ವಾರಗಳನ್ನು ಅಮೃತಶಿಲೆಯಿಂದ ಮಾಡಲಾಗಿದ್ದು, ಸುತ್ತು ಶಿಲಾಮಯ ಸ್ತಂಭಗಳನ್ನು ಅಳವಡಿಸಿ ಬಸದಿಯ ಪ್ರಧಾನ ಗುಡಿಯನ್ನು ನಿರ್ಮಿಸಲಾಗಿದೆ. ಸುತ್ತು ಪೌಳಿಯ ಕಾರ್ಯ ನಡೆಯಬೇಕಾಗಿದೆ.
ಒಂದೂವರೆ ಕೋಟಿ ರೂಪಾಯಿ ವೆಚ್ಚ: ಸುಮಾರು 75 ವರ್ಷಗಳ ಹಿಂದೆ ಇದರ ಪುನರ್ ನಿರ್ಮಾಣ ಕಾರ್ಯ ನಡೆದಿರುವ ಬಗ್ಗೆ ಮಾಹಿತಿ ಇದೆ. ಇದೀಗ ನಾವುಗಳು ಸುಮಾರು ₹ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿಕೊಂಡಿದ್ದೆವು. ಆದರೆ, ಸುಮಾರು ₹ 1.5 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ₹ 50 ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಪ್ರಸಕ್ತ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಅವರು ₹ 50 ಲಕ್ಷ ಒದಗಿಸಿದ್ದಾರೆ. ಶಾಸಕರ ನಿಧಿಯಿಂದಲೂ ₹ 10 ಲಕ್ಷ ಒದಗಿಸಿದ್ದಾರೆ. ಹೆಚ್ಚುವರಿಯಾಗಿ ₹50 ಲಕ್ಷ ಅನುದಾನವನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಜ್ರಕುಮಾರ್ ಜೈನ್ ವಿವರಿಸಿದರು.
ಶೀಘ್ರ ಲೋಕಾರ್ಪಣೆ-ಧನ್ಯಕುಮಾರ್ ರೈ: ಉಪ್ಪಿನಂಗಡಿ, ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯಲ್ಲಿನ ಈ ಬಸದಿಗೆ ಹತ್ತಕ್ಕೂ ಕಡಿಮೆ ಸಂಖ್ಯೆಯಲ್ಲಿ ಜೈನ ಕುಟುಂಬಗಳಿದ್ದು, ಸರ್ಕಾರ ಮತ್ತು ಭಕ್ತ ಸಮೂಹದ ಸಹಕಾರ ಪಡೆದು ಬಸದಿ ಪುನರ್ ನಿರ್ಮಾಣ ನಡೆಸಲಾಗುತ್ತಿದೆ. ಆಡಳಿತ ಸಮಿತಿ ಸದಸ್ಯರು ಮುಂದಿನ ದಿನಗಳಲ್ಲಿ ಸಭೆ ಸೇರಿ ಬಸದಿಯ ಲೋಕಾರ್ಪಣೆ ಕಾರ್ಯದ ಬಗ್ಗೆ ನಿರ್ಣಯಿಸಲಿದ್ದಾರೆ ಎಂದು ಪುನರ್ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.