ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ‘ಮಂಗಳೂರು’ ಎಂದಾಗಲಿ

ಮಂಗಳೂರು ಜಿಲ್ಲೆ ತುಳು ಪರ ಹೋರಾಟ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 6:56 IST
Last Updated 9 ಜುಲೈ 2025, 6:56 IST
‘ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಿಸಿ, ತುಳು ಅಸ್ಮಿತೆ ಉಳಿಸಿ’ ಅಭಿಯಾನದ ಪೋಸ್ಟರ್ ಅನ್ನು ಮಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು. ಕಸ್ತೂರಿ ‍ಪಂಜ, ಬಿ.ಎ.ಮೊಹಿಯುದ್ದೀನ್ ಬಾವ, ದಯಾನಂದ ಕತ್ತಲಸಾರ್‌. ರಕ್ಷಿತ್ ಶಿವರಾಂ, ಕಿರಣ್ ಕುಮಾರ್ ಕೋಡಿಕಲ್ ಮೊದಲಾದವರು ಭಾಗವಹಿಸಿದ್ದರು
‘ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಿಸಿ, ತುಳು ಅಸ್ಮಿತೆ ಉಳಿಸಿ’ ಅಭಿಯಾನದ ಪೋಸ್ಟರ್ ಅನ್ನು ಮಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು. ಕಸ್ತೂರಿ ‍ಪಂಜ, ಬಿ.ಎ.ಮೊಹಿಯುದ್ದೀನ್ ಬಾವ, ದಯಾನಂದ ಕತ್ತಲಸಾರ್‌. ರಕ್ಷಿತ್ ಶಿವರಾಂ, ಕಿರಣ್ ಕುಮಾರ್ ಕೋಡಿಕಲ್ ಮೊದಲಾದವರು ಭಾಗವಹಿಸಿದ್ದರು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು’ ಜಿಲ್ಲೆ ಎಂದು ಬದಲಾಯಿಸಬೇಕು ಎಂದು ‘ಮಂಗಳೂರು ಜಿಲ್ಲೆ ತುಳು ಪರ ಹೋರಾಟ ಸಮಿತಿ’ ಒತ್ತಾಯಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್, ‘ಸುಮಾರು 2 ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಜಿಲ್ಲೆಗೆ  ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಹೆಸರುಗಳಿದ್ದವು.  ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಪ್ರದೇಶವನ್ನು ಒಳಗೊಂಡ ಭೂಭಾಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ನೆಲಗಟ್ಟಿನಲ್ಲಿ ತುಳುನಾಡು ಎಂಬ ಹೆಸರು ಇತ್ತು. 2 ಸಾವಿರ ವರ್ಷಗಳ ಹಿಂದಿನದು ಎನ್ನಲಾದ ತಮಿಳಿನ ಸಂಗಂ ಸಾಹಿತ್ಯವಾದ 'ಅಗನಾನೂರು' ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿದೆ. ಆಳುಪರು, ಪಲ್ಲವರು, ಹೊಯ್ಸಳರು, ವಿಜಯನಗರ, ಕೆಳದಿ ರಾಜರು ತುಳು ದೇಶ, ತುಳು ರಾಜ್ಯ ಎಂದು ಈ ಪ್ರದೇಶವನ್ನು ಗುರುತಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತುಳುನಾಡನ್ನು ಆಡಳಿತಾತ್ಮಕವಾಗಿ ಮಂಗಳೂರು ಮತ್ತು ಬಾರ್ಕೂರು ರಾಜ್ಯಗಳೆಂದು ವಿಭಜಿಸಲಾಗಿತ್ತು’ ಎಂದರು.

'ಕೆನರಾ ಎಂಬುದು ಪೋರ್ಚುಗೀಸರು ಮತ್ತು ಬ್ರಿಟಿಷರು ನೀಡಿದ ಹೆಸರು. ಮುಂದೆ ಅದು ಅಪಭ್ರಂಶವಾಗಿ 'ಕನ್ನಡ'ವಾಗಿ ಬದಲಾಯಿತು. ದಾಸ್ಯದ ಸಂಕೋಲೆಯಿಂದ ದೇಶ ಮುಕ್ತಿ ಪಡೆದರೂ ನಗರಗಳ ಹೆಸರುಗಳು ವಸಾಹತುಶಾಹಿಯ ನಿಶಾನೆ ಎಂಬಂತೆ ಉಳಿದಿವೆ. ಅದಕ್ಕೆ 'ದಕ್ಷಿಣ ಕನ್ನಡ' ಸಾಕ್ಷಿ’ ಎಂದರು.

ADVERTISEMENT

‘ವಿಜಯನಗರ ಅರಸರ ಕಾಲದಿಂದಲೂ ಈ ಪ್ರದೇಶಕ್ಕೆ ಇದ್ದ ಹೆಸರು ಮಂಗಳೂರು. ಆ ಹೆಸರನ್ನೇ ಜಿಲ್ಲೆಗೆ ಇಡಬೇಕೆಂಬುದು ಸಾಮಾಜಿಕ ಚಿಂತಕರು ಮತ್ತು ಧಾರ್ಮಿಕ ಮುಖಂಡರು ಹಾಗೂ ರಾಜಕಾರಣಿಗಳ ಪಕ್ಷಾತೀತ ಬೇಡಿಕೆ. ಜಿಲ್ಲೆಯ ಸಂಸದರು ಶಾಸಕರು, ವಿಧಾನ ಪರಿಷತ್ ಸದಸ್ಯರು ಜಿಲ್ಲೆಗೆ ಮಂಗಳೂರು ಹೆಸರಿಡುವುದಕ್ಕೆ ಒಲವು ತೋರಿಸಿದ್ದಾರೆ. ಈ ಕುರಿತು ಜನಾಭಿಪ್ರಾಯ ಮೂಡಿಸಲು ‘ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಿಸಿ, ತುಳು ಅಸ್ಮಿತೆ ಉಳಿಸಿ’ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ‘ದೇಶ ವಿದೇಶಗಳಲ್ಲಿ ಇಲ್ಲಿನ ಮೂಲ ನಿವಾಸಿಗಳನ್ನು ಮಂಗಳೂರಿನವರೆಂದೇ ಗುರುತಿಸುತ್ತಾರೆ. ಮಂಗಳೂರು ಎಂಬ ಹೆಸರು ಇಡುವುದರಿಂದ ಜಿಲ್ಲೆಯ ಬ್ರ್ಯಾಂಡ್‌ ಮೌಲ್ಯ ಹೆಚ್ಚಳವಾಗುತ್ತದೆ. ಇದು ಜಿಲ್ಲೆಗೆ ಉದ್ದಿಮೆಗಳು, ಐ.ಟಿ ಕಂಪನಿಗಳು ಮತ್ತು ಇತರ ಯೋಜನೆಗಳನ್ನು ಆಕರ್ಷಿಸಲು ಸಹಕಾರಿ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರವೇ ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಬಿಜೆಪಿ ನಗರಾಡಳಿತ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ಕಿರಣ್ ಕುಮಾರ್ ಕೋಡಿಕಲ್‌, ಮುಖಂಡರಾದ ಬಿ.ಎ.ಮೊಹಿಯುದ್ದೀನ್ ಬಾವ, ದಿಲ್‌ರಾಜ್ ಆಳ್ವ, ಕಸ್ತೂರಿ ಪಂಜ, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್‌ ಪ್ರದೀಪ್ ಸರಿಪಲ್ಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.