ADVERTISEMENT

44ನೇ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿಗೆ ಮಂಗಳೂರಿನಲ್ಲಿ ಸ್ವಾಗತ

44ನೇ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿಗೆ ಮಂಗಳೂರಿನಲ್ಲಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 14:10 IST
Last Updated 19 ಜುಲೈ 2022, 14:10 IST
44ನೇ ಚೆಸ್‌ ಒಲಿಂಪಿಯಾಡ್‌ನ ರಿಲೇ ಜ್ಯೋತಿಯನ್ನು ಮಂಗಳೂರಿನಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಗ್ರ್ಯಾಂಡ್‌ ಮಾಸ್ಟರ್‌ಗಳಾದ ತೇಜ ಕುಮಾರ್ ಅವರಿಂದ ಸ್ವೀಕರಿಸಿದರು. ಕರ್ಣಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ಇದ್ದರು. ಪ್ರಜಾವಾಣಿ ಚಿತ್ರ
44ನೇ ಚೆಸ್‌ ಒಲಿಂಪಿಯಾಡ್‌ನ ರಿಲೇ ಜ್ಯೋತಿಯನ್ನು ಮಂಗಳೂರಿನಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಗ್ರ್ಯಾಂಡ್‌ ಮಾಸ್ಟರ್‌ಗಳಾದ ತೇಜ ಕುಮಾರ್ ಅವರಿಂದ ಸ್ವೀಕರಿಸಿದರು. ಕರ್ಣಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ಇದ್ದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಭಾರತದ ಆತಿಥ್ಯದಲ್ಲಿತಮಿಳುನಾಡಿನ ಮಹಾಬಲಿಪುರಂನಲ್ಲಿ ಇದೇ 28ರಿಂದ ಆಗಸ್ಟ್‌ 10ರ ವರೆಗೆನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ನ ರಿಲೇ ಜ್ಯೋತಿಯನ್ನು ಮಂಗಳೂರಿನಲ್ಲಿ ಜಿಲ್ಲಾಡಳಿತಯಿಂದಮಂಗಳವಾರ ಸ್ವಾಗತಿಸಲಾಯಿತು.

ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ರಿಲೇ ಜ್ಯೋತಿಯನ್ನು ಸ್ವಾಗತಿಸಿ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಪ್ರಮುಖ 75 ನಗರದಲ್ಲಿ ಸಂಚರಿಸಲಿರುವ ರಿಲೇ ಜ್ಯೋತಿಯೂ ಮಂಗಳೂರಿಗೆ ಬಂದಿರುವುದು ಐತಿಹಾಸಿಕ ಕ್ಷಣವಾಗಿದೆ.ರಾಜ್ಯದ ಬೆಂಗಳೂರು ಮತ್ತು ಮಂಗಳೂರಿಗೆ ಮಾತ್ರ ಸುವರ್ಣಾವಕಾಶ ದೊರಕಿದೆ. ಈ ಕ್ರೀಡಾ ಜ್ಯೋತಿಯೂ ದೇಶದಾದ್ಯಂತ ಇನ್ನಷ್ಟು ಪ್ರತಿಭೆಗಳ ಬದುಕಿಗೆ ಬೆಳಕು ನೀಡಲಿ’ ಎಂದು ಆಶಿಸಿದರು.

ಕರ್ಣಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ಮಾತನಾಡಿ, ‘ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಚದುರಂಗದಾಟವು ಒಂದು. ಅದು ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ’ ಎಂದು ಹೇಳಿದರು.

ADVERTISEMENT

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್ ಮಾತನಾಡಿ, ‘ಚೆಸ್‌ ಒಲಿಂಪಿಯಾಡ್‌ ಭಾರತದಲ್ಲಿ ಆಯೋಜನೆಯಾಗಿರುವುದು ಇದೇ ಮೊದಲು. ಈ ಬಾರಿ ದಾಖಲೆಯ 187 ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳುತ್ತಿವೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್‌.ಕೆ, ಯೆನೆಪೋಯ ವಿವಿ (ಪರಿಗಣಿಸಲ್ಪಟ್ಟ) ಕುಲಪತಿ ಡಾ.ಎಂ. ವಿಜಯ ಕುಮಾರ್,ಕರ್ನಾಟಕ ಚೆಸ್ ಫೆಡರೇಷನ್‍ನ ಗೌರವಾಧ್ಯಕ್ಷ ಡಾ.ರಾಜಗೋಪಾಲ್ ಶೆಣೈ, ದಕ್ಷಿಣ ಕನ್ನಡ ಚೆಸ್ ಫೆಡರೇಷನ್ ಅಧ್ಯಕ್ಷ ರಮೇಶ್ ಕೋಟೆ, ಎನ್‌ಸಿಸಿಯ ಕಮಾಂಡಿಗ್‌ ಅಫೀಸರ್‌ ಕರ್ನಲ್‌ ನಿತಿನ್‌ ಭಿಡೆ,ಗ್ರ್ಯಾಂಡ್‌ ಮಾಸ್ಟರ್‌ಗಳಾದತೇಜ ಕುಮಾರ್, ಜಿ.ಎ. ಸ್ಟಾನಿ,ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್‌ಪೇಟೆ, ಯೆನೆಪೋಯ ವಿವಿಯ ಎನ್‌ಎಸ್‌ಎಸ್‌ ಸಂಯೋಜಕಿ ಡಾ.ಅಶ್ವಿನಿ ಶೆಟ್ಟಿ, ಎನ್‌ಸಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಪುರಭವನದ ವರೆಗೆ ಬೈಕ್‌ ಮತ್ತು ಕಾರುಗಳ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.