ADVERTISEMENT

ಪ್ರೀತಿಯಿಂದ ಮಕ್ಕಳ ಮನ ಗೆಲ್ಲಿ: ಉಪನ್ಯಾಸಕಿ ಡಾ. ನಾಗವೇಣಿ ಮಂಚಿ ಸಲಹೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 10:25 IST
Last Updated 10 ನವೆಂಬರ್ 2018, 10:25 IST
gur-nov-10-dr nagaveni-3
gur-nov-10-dr nagaveni-3   

ಬಜ್ಪೆ: ‘ಪಾಲಕರು ಮತ್ತು ಶಿಕ್ಷಕರಿಂದ ಮಕ್ಕಳ ಮನಸ್ಸು ಅರಳಿಸುವ ಕೆಲಸವಾಗಬೇಕೇ ಹೊರತು ನರಳಿಸುವುದಲ್ಲ’ ಎಂದು ಮಂಗಳೂರು ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ-ಉಪನ್ಯಾಸಕಿ ಡಾ. ನಾಗವೇಣಿ ಮಂಚಿ ಹೇಳಿದರು.

ಗುರುಪುರ ಬಂಗ್ಲೆಗುಡ್ಡೆ ಸೈಟಿನ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ`ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ' ವಿಷಯ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಗುರುಪುರ ಗ್ರಾಮ ಪಂಚಾಯಿತಿ ಮತ್ತು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

ಮಕ್ಕಳಿಗೆ ತಂದೆ-ತಾಯಿ ಪ್ರೀತಿ ನೀಡಬೇಕು. ಪ್ರೀತಿಯಿಂದ ಮಕ್ಕಳ ಮನಸ್ಸು ಗೆಲ್ಲಲು ಸಾಧ್ಯವಿದೆ. ಮಕ್ಕಳು ಪೋಷಕರ ಭಾವನೆಗಳಿಗೆ ಹೆಚ್ಚು ಸ್ಪಂದಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮೊಬೈಲ್, ಟಿ.ವಿ. ಧಾರಾವಾಹಿ ಬೇಡವೇ ಬೇಡ. ನಿಮ್ಮ ಮಕ್ಕಳಲ್ಲಿರುವ ಒಂದು ವಿಶಿಷ್ಟ ಗುಣ ಗುರುತಿಸಿ, ಬೆಳೆಸುವ ಜಾಣ್ಮೆ ನಿಮ್ಮದಾಗಲಿ’ ಎಂದರು.

ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಮತ್ತು ತಂದೆಯ ಪಾತ್ರ ಸಮಾನವಾಗಿದೆ. ಇವರು ಕರ್ತವ್ಯದಿಂದ ನುಣುಚಿಕೊಳ್ಳುವಂತಿಲ್ಲ. ಮಕ್ಕಳು ತಪ್ಪು ಮಾಡಿದಾಗ ಪ್ರೀತಿಯಿಂದ ತಿದ್ದಬೇಕು, ಶಿಕ್ಷಿಸುವುದಲ್ಲ. ಶಿಕ್ಷಿಸುತ್ತ ಹೋದಲ್ಲಿ ಬೆಳೆಯುತ್ತ ಆ ಮಗು ಅಪರಾಧಿಯಾಗುವ ಅಪಾಯವಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಗುರುಪುರ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಉದಯ ಭಟ್, ‘ಮಕ್ಕಳು ಮಾದಕ ವಸ್ತುವಿನ ವ್ಯವಸನಿಗಳಾಗದಂತೆ ಎಚ್ಚರ ವಹಿಸಿ. ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡುವಲ್ಲಿ ಪಾಲಕರ ಪಾತ್ರ ಹೆಚ್ಚಿದೆ ಎಂದರು. ಸ್ಥಳೀಯ ವಾರ್ಡ್ ಸದಸ್ಯ ರಾಜೇಶ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ರಥಬೀದಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಶುಭಾ ಪ್ರಾಸ್ತಾವಿಕ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಭಾರತಿ ಮಾತನಾಡಿದರು. ವಿದ್ಯಾರ್ಥಿನಿ ಎಲಿಜಬೆತ್ ಸ್ವಾಗತಿಸಿ, ವಿದ್ಯಾರ್ಥಿನಿ ರಂಜನಿ ವಂದಿಸಿದರು. ವೇದಿಕೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯೆ ಸೇಸಮ್ಮ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು, ಪುಟಾಣಿಗಳು, ತಾಯಂದಿರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.