
ಮಂಗಳೂರು: ರಸ್ತೆ ಬದಿಯಲ್ಲಿ ಮಾರೆತ್ತರಕ್ಕೆ ಹುಲ್ಲು ಬೆಳೆದರೂ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿಲ್ಲ, ಬೀದಿದೀಪಗಳ ನಿರ್ವಹಣೆ ಇಲ್ಲದೆ, ಕೆಲವು ಕಡೆಗಳಲ್ಲಿ ಮುಸ್ಸಂಜೆಯ ನಂತರ ಓಡಾಟವೇ ಕಷ್ಟವಾಗಿದೆ. ಹೆದ್ದಾರಿ ಬದಿಯ ಸರ್ವಿಸ್ ರಸ್ತೆ ಅಧೋಗತಿಗೆ ತಲುಪಿದೆ...
ಮಂಗಳೂರು ನಗರದ ಹೊರವಲಯದಲ್ಲಿರುವ ತಿರುವೈಲ್ ವಾರ್ಡ್ ನಿವಾಸಿಗಳು ಹೇಳಿಕೊಂಡ ಸಮಸ್ಯೆಗಳಿವು.
ಮಹಾನಗರ ಪಾಲಿಕೆಯ ಪೂರ್ವದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಿರುವೈಲ್ ವಾರ್ಡ್, ಪಶ್ಚಿಮದಲ್ಲಿ ಪಚ್ಚನಾಡಿ ಗ್ರಾಮದ ಗಡಿ ಪ್ರದೇಶವನ್ನು ಒಳಗೊಂಡಿದೆ. ವಾಮಂಜೂರು, ಕೆತ್ತಿಕಲ್, ಅಮೃತ ನಗರ, ಕೊಳೆಕೆಬೈಲು, ಪರಾರಿ, ಸಂತೋಷನಗರ ಮೊದಲಾದ ಪ್ರದೇಶಗಳು ಈ ವಾರ್ಡ್ ವ್ಯಾಪ್ತಿಯಲ್ಲಿವೆ.
‘ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆ ಬದಿಯಲ್ಲಿ ಬೆಳೆಯುವ ಕಾಡುಗಿಡಗಳು, ಹುಲ್ಲು ತೆರವುಗೊಳಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿಲ್ಲ. ಈ ಹಿಂದೆ ಪ್ರಾರಂಭಿಸಿರುವ ಕಾಮಗಾರಿಗಳೂ ಆಮೆಗತಿಯಲ್ಲಿ ಸಾಗುತ್ತಿವೆ’ ಎನ್ನುತ್ತಾರೆ ಕಿಶೋರ್ ವಾಸ್.
‘ರಸ್ತೆ ಬದಿಯಲ್ಲಿ ಹುಲ್ಲು ಬೆಳೆದ ಕಾರಣ ಸಂಜೆ ಕತ್ತಲಾದ ಮೇಲೆ ಪಾದಚಾರಿಗಳಿಗೆ ಓಡಾಟವೇ ಕಷ್ಟವಾಗಿದೆ. ಟ್ಯೂಷನ್‌ಗೆ ಹೋಗಿ ಬರುವ ಶಾಲೆ ಮಕ್ಕಳು, ಮಹಿಳೆಯರು ಹೆದರುತ್ತ ಹೋಗಬೇಕಾದ ಪರಿಸ್ಥಿತಿ ಇದೆ. ಪಾಲಿಕೆ ರಸ್ತೆ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು’ ಎಂದು ಆಗ್ರಹಿಸಿದರು ವಾಮಂಜೂರಿನ ವ್ಯಾಪಾರಿ ದಾಮೋದರ.
‘ಸಂತೋಷ ನಗರಕ್ಕೆ ಹೋಗುವ ಮಾರ್ಗದಲ್ಲಿ ಚರಂಡಿ ಕಾಮಗಾರಿ ಅರೆಬರೆಯಾಗಿದೆ. ಅದರ ಮೇಲೆ ಕಾಂಕ್ರೀಟ್ ಹಾಕುವ ಕೆಲಸ ನಡೆದಿಲ್ಲ. ಪಚ್ಚನಾಡಿ ತಿರುವೈಲ್ ಸಂಪರ್ಕಿಸುವ ರಸ್ತೆ ಹಾಳಾಗಿದೆ. ಕಸದ ವಾಹನ ನಿಯಮಿತವಾಗಿ ಬರದ ಕಾರಣ ರಸ್ತೆ ಬದಿ ಕಸ ಎಸೆಯುವ ಪ್ರಕರಣಗಳು ಹೆಚ್ಚುತ್ತಿವೆ. ಪಚ್ಚನಾಡಿಯ ತ್ಯಾಜ್ಯ ನಿರ್ವಹಣಾ ಘಟಕ ಸಮೀಪದಲ್ಲಿ ಇರುವುದರಿಂದ ಈ ಭಾಗದಲ್ಲಿ ಬೀದಿನಾಯಿಗಳ ಕಾಟ ಹೆಚ್ಚು’ ಎಂದು ಬೇಸರಿಸಿದರು ಸ್ಥಳೀಯ ನಿವಾಸಿಯೊಬ್ಬರು.
‘ತಿರುವೈಲ್ ವಾರ್ಡ್‌ನಲ್ಲಿ ಹಿಂದೂ ಸ್ಮಶಾನದ ಕೊರತೆ ಇದೆ. ಯಾರಾದರೂ ಮೃತಪಟ್ಟರೆ, ಮೂಡುಶೆಡ್ಡೆ ಅಥವಾ ಪಚ್ಚನಾಡಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ಹೇಳಿದರು.
‘ನಮ್ಮ ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಚರಂಡಿ ಸಮಸ್ಯೆ ಬಹುತೇಕ ಬಗೆಹರಿದಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡು, ಆದಷ್ಟು ಬೇಗ ಸರ್ವಿಸ್ ರಸ್ತೆ ನಿರ್ಮಾಣವಾದರೆ ಜನರಿಗೆ ಅನುಕೂಲ’ ಎಂದು ವಾಮಂಜೂರಿನ ಇಕ್ಬಾಲ್ ಹೇಳಿದರು.
ಕೆತ್ತಿಕಲ್‌ನಲ್ಲಿ ಹೆದ್ದಾರಿ ನಿರ್ಮಾಣ, ಅವೈಜ್ಞಾನಿಕ ಮಣ್ಣು ತೆರವಿನ ಕಾರಣಕ್ಕೆ ಸೃಷ್ಟಿಯಾಗಿರುವ ಮಳೆಗಾಲದಲ್ಲಿ ಗುಡ್ಡ ಜರಿಯುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
‘ನಾಲ್ಕು ದಿನಕ್ಕೊಮ್ಮೆ ಬರುವ ಕಸದ ಗಾಡಿ’
ಹಸಿ ಕಸ ಕೊಂಡೊಯ್ಯುವ ವಾಹನ ನಾಲ್ಕೈದು ದಿನಗಳಿಗೊಮ್ಮೆ ಬರುತ್ತದೆ. ಇದರಿಂದ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಬೀದಿದೀಪದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. 9ನೇ ಕ್ರಾಸ್‌ನಲ್ಲಿ ಚರಂಡಿ ನಿರ್ವಹಣೆ ಸಮರ್ಪಕವಾಗಿಲ್ಲ. ಕೆತ್ತಿಕಲ್‌ನ ಕುಟ್ಹೀನಾ ಕಾಂಪೌಂಡ್‌ನಲ್ಲಿ ನೀರು ಹಾಗೂ ಬೀದಿದೀಪದ ಸಮಸ್ಯೆ ಇದೆ. ತಿರುವೈಲ್ ಎಂಡ್ ಪಾಯಿಂಟ್‌ಗೆ ಹೋಗುವ ಮಾರ್ಗದಲ್ಲಿ ಬೀದಿದೀಪ ಇಲ್ಲದಿರುವುದು ಅನೈತಿಕ ಚಟುವಟಿಕೆಗೆ ದಾರಿಮಾಡಿಕೊಟ್ಟಿದೆ ಎಂದು ಮೇರಿ ಕುಟ್ಹೀನಾ ಹೇಳಿದರು.
ಸ್ಮಶಾನಕ್ಕೆ ಜಾಗ ಅನುದಾನ ಮೀಸಲು’
ಎರಡು ಅವಧಿಗೆ ಈ ಭಾಗದಲ್ಲಿ ಕಾರ್ಪೊರೇಟರ್ ಆಗಿ ಕೆಲಸ ಮಾಡಿದ್ದೇನೆ. ಒಂದನೇ ಅವಧಿಯಲ್ಲಿ ಬಾಕಿಯಾಗಿದ್ದ ಕೆಲಸಗಳನ್ನು ಎರಡನೇ ಅವಧಿಯಲ್ಲಿ ಮಾಡಲು ಸಾಧ್ಯವಾಗಿದೆ. ತಿರುವೈಲ್ ವಾರ್ಡ್‌ನಲ್ಲಿ ಶೇ 20ರಷ್ಟು ಮಾತ್ರ ಕಾಂಕ್ರೀಟ್ ಚರಂಡಿ ಇತ್ತು. ಈಗ ಶೇ 80ರಷ್ಟು ಚರಂಡಿ ಕೆಲಸ ಪೂರ್ಣಗೊಂಡಿದೆ. ಕೆತ್ತಿಕಲ್‌ನಲ್ಲಿ ನಿರ್ಮಾಣವಾಗಿರುವ ಎಸ್‌ಟಿಪಿ ಘಟಕ ಉದ್ಘಾಟನೆಗೆ ಬಾಕಿ ಇದೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯೆ ಹೇಮಲತಾ ರಘು ಸಾಲಿಯಾನ್ ಪ್ರತಿಕ್ರಿಯಿಸಿದರು. ಜಾಗದ ಸಮಸ್ಯೆ ಮತ್ತಿತರ ತಾಂತ್ರಿಕ ಕಾರಣದಿಂದ ಕೊಳಕೆಬೈಲು ಪರಾರಿ ಕಡೆ ಕೆಲವು ಒಳರಸ್ತೆಗಳು ಹೊರತುಪಡಿಸಿದರೆ ಬಹುತೇಕ ಎಲ್ಲ ರಸ್ತೆಗಳ ನಿರ್ಮಾಣ ಆಗಿದೆ. ಕೆತ್ತಿಕಲ್‌ನಲ್ಲಿ ಸ್ಮಶಾನಕ್ಕಾಗಿ 1 ಎಕರೆ ಜಾಗ ಹಾಗೂ ₹1.5 ಕೋಟಿ ಅನುದಾನ ಮೀಸಲಿಡಲಾಗಿದೆ. ಪಾಲಿಕೆಯಿಂದ ಕಾಮಗಾರಿ ವಿಳಂಬವಾಗಿದೆ. ವಾಮಂಜೂರು ಜಂಕ್ಷನ್‌ನಿಂದ ಗುರುಪುರವರೆಗೆ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಆಗಬೇಕು. ಇದಕ್ಕೆ ದೊಡ್ಡ ಮೊತ್ತದ ಅನುದಾನ ಅಗತ್ಯ ಇರುವ ಕಾರಣ ಅದು ಆಗಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.