
ಪುತ್ತೂರು: ‘ಸಮಾಜದ ಸೇವೆ ಮಾಡಲು, ಉತ್ತಮ ವೃತ್ತಿ, ಹೆಸರು, ಕೀರ್ತಿ ಸಂಪಾದಿಸಲು ನಾಗರಿಕ ಸೇವೆ ಉತ್ತಮ ವೇದಿಕೆ. ಸಮರ್ಪಕ ಸಿದ್ಧತೆ, ಕಠಿಣ ಪರಿಶ್ರಮದಿಂದ ಗ್ರಾಮೀಣ ವಿದ್ಯಾರ್ಥಿಗಳು ಕೂಡ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಐಪಿಎಸ್, ಐಎಎಸ್ ಅಧಿಕಾರಿಗಳಾಗಲು ಸಾಧ್ಯ’ ಎಂದು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಆರ್ಯಾಪು ಗ್ರಾಮದ ಸಂಪ್ಯದ ಅಕ್ಷಯ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನೇತೃತ್ವದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್, ರೋಟರ್‍ಯಾಕ್ಟ್ ಕ್ಲಬ್, ಅಕ್ಷಯ ಕಾಲೇಜು ಮತ್ತು ಐಕ್ಯುಎಸಿ ಸಹಯೋಗದಲ್ಲಿ ಬುಧವಾರ ನಡೆದ ಐಎಎಸ್, ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಪರೀಕ್ಷೆ ಬರೆಯಲು ಹೊರಡುವ ಮುನ್ನ ನಾನೇಕೆ ಈ ಕ್ಷೇತ್ರ ಆರಿಸಿಕೊಂಡಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆ ಇದ್ದರೆ ಮಾತ್ರ ಕಠಿಣ ಸವಾಲನ್ನು ಎದುರಿಸಿ ಗೆಲ್ಲಲು ಸಾಧ್ಯ. ಸಿವಿಲ್ ಸರ್ವಿಸ್‌ನಲ್ಲಿ 20ಕ್ಕೂ ಹೆಚ್ಚು ವಿಭಾಗಗಳಲ್ಲಿ ಅವಕಾಶಗಳಿವೆ. ಯುಪಿಎಸ್ ಪರೀಕ್ಷೆಗೆ ಪ್ರತಿವರ್ಷ ಸುಮಾರು 10 ಲಕ್ಷ ಮಂದಿ ನೋಂದಣಿ ಮಾಡುತ್ತಾರೆ. ಅವರಲ್ಲಿ 15 ಸಾವಿರ ಮಂದಿ ಪ್ರಾಥಮಿಕ ಹಂತದ ಪರೀಕ್ಷೆ ಉತ್ತೀರ್ಣರಾಗಿ ಮೇನ್ಸ್‌ಗೆ ಆಯ್ಕೆಯಾಗುತ್ತಾರೆ. ಅದರಲ್ಲಿ ಉತ್ತೀಣರಾದವರು ಸಂದರ್ಶನ ಉತ್ತೀರ್ಣರಾಗಬೇಕಾಗುತ್ತದೆ. ಮೇನ್ಸ್‌ನಲ್ಲಿ ಅನುತ್ತೀರ್ಣಗೊಂಡರೆ ಮತ್ತೆ ಪ್ರಿಲಿಮಿನರಿ ಪರೀಕ್ಷೆಯಿಂದಲೇ ಪ್ರಾರಂಭಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ, ಐಎಎಸ್ ದರ್ಶನ ಸಂಸ್ಥೆಯ ಮುಖ್ಯಸ್ಥ ದರ್ಶನ್ ಗರ್ತಕೆರೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಶಿಕ್ಷಣ, ಉದ್ಯಮದಲ್ಲಿ ಬಹಳಷ್ಟು ಮುಂದುವರಿದಿದ್ದರೂ ಇಲ್ಲಿ ನಾಗರಿಕ ಸೇವಾ ಕ್ಷೇತ್ರಕ್ಕೆ ಹೋಗುವವರ ಸಂಖ್ಯೆ ವಿರಳವಾಗಿದೆ. ಇದಕ್ಕೆ ಇಲ್ಲಿರುವ ಮಾಹಿತಿ ಕೊರತೆಯೇ ಕಾರಣ. ಅದನ್ನು ನೀಗಿಸಲು ಇಂತಹ ಕಾರ್ಯಾಗಾರಗಳು ಉಪಯುಕ್ತ ಎಂದರು. ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ, ರೋಟರಿ ಕ್ಲಬ್ ಯುವ ಅಧ್ಯಕ್ಷ ಕುಸುಮರಾಜ್ ಮಾತನಾಡಿದರು. ಸಾಹಿತಿ ಎಚ್.ಜಿ. ಶ್ರೀಧರ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಭಾಗವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಸಂಪತ್ ಪಕ್ಕಳ ಸ್ವಾಗತಿಸಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶೇ.ಕಜೆಮಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.