ADVERTISEMENT

‘ಕ್ಲಾಸ್ ಆನ್ ವೀಲ್ಸ್‌’ ಬಸ್‌ನಲ್ಲಿ ಕಂಪ್ಯೂಟರ್ ಶಿಕ್ಷಣ

ಎಂ. ಫ್ರೆಂಡ್ಸ್ ಸಂಸ್ಥೆಯಿಂದ ₹60 ಲಕ್ಷದ ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 7:23 IST
Last Updated 16 ನವೆಂಬರ್ 2023, 7:23 IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಲಿರುವ ‘ಕ್ಲಾಸ್ ಆನ್ ವೀಲ್ಸ್’ ಬಸ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಲಿರುವ ‘ಕ್ಲಾಸ್ ಆನ್ ವೀಲ್ಸ್’ ಬಸ್   

ಮಂಗಳೂರು: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್‌ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ಉದ್ದೇಶದಿಂದ ‘ಕ್ಲಾಸ್ ಆನ್ ವೀಲ್ಸ್‌’ ಡಿಜಿಟಲ್ ಬಸ್ ಸಂಚಾರ ಪ್ರಾರಂಭಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಹನೀಫ್ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲೇ ಪ್ರಥಮವಾಗಿ ರೂಪಿಸಿರುವ ಈ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದ್ದು, ವಾರ್ಷಿಕವಾಗಿ 5,000 ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದರು.

ಏನಿದು ಡಿಜಿಟಲ್ ಬಸ್?: ಹವಾನಿಯಂತ್ರಿತ ಬಸ್‌ನ್ನು  ಕಂಪ್ಯೂಟರ್ ತರಗತಿ ಕೊಠಡಿಯಂತೆ ಪರಿವರ್ತಿಸಲಾಗಿದೆ. 16 ಲ್ಯಾಪ್‌ಟಾಪ್, 16 ತಿರುಗುವ ಕುರ್ಚಿ, 16 ಡೆಸ್ಕ್‌ಗಳು, ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಕಾನ್ಫರೆನ್ಸ್‌ಗೆ ಪ್ರಾಜೆಕ್ಟರ್, ಮ್ಯೂಸಿಕ್ ಸಿಸ್ಟಮ್, ಮೈಕ್, ಎಇಡಿ ಡಿಜಿಟಲ್ ಬೋರ್ಡ್, ವೈಫೈ ವ್ಯವಸ್ಥೆ, ಕಲರ್ ಪ್ರಿಂಟರ್, ಸ್ಕ್ಯಾನರ್, ಪ‍ವರ್ ಪಾಯಿಂಟ್, ಜನರೇಟರ್ ಇವೆ. ಮಕ್ಕಳು, ಶಿಕ್ಷಕರ ಹಾಜರಾತಿ ದೃಢಪಡಿಸಲು ಬಯೊಮೆಟ್ರಿಕ್ ವ್ಯವಸ್ಥೆಯೂ ಇದೆ. 25 ಜನರನ್ನು ಸೇರಿಸಿ ಸಭೆ ನಡೆಸಬಹುದಾಗಿದೆ. ಮಕ್ಕಳ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ವಿವರಿಸಿದರು.

ADVERTISEMENT

ದುಬೈಯ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ ಕ್ಲೌಡ್‌ ಮತ್ತು ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥಾಪಕರಾಗಿರುವ ಹನೀಫ್ ಪುತ್ತೂರು ಅವರು ಎಂ. ಫ್ರೆಂಡ್ಸ್ ಟ್ರಸ್ಟ್‌ನ ಯುಎಇ ಪ್ರಾಂತ್ಯದ ಮುಖ್ಯಸ್ಥರು. ಅವರು ಅಬುದಾಬಿಯ ಸಂಸ್ಥೆಯೊಂದು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಆಶಯದೊಂದಿಗೆ ಭಾಗವಹಿಸಿದ್ದರು. ಅವರ ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್‌ಲೈನ್‌ನಲ್ಲಿ ಮತ ಹಾಕಿ, ಅವರನ್ನು ಗೆಲ್ಲಿಸಿದ್ದರು. ಅಲ್ಲಿ ದೊರೆತ ಬಹುಮಾನದ ಮೊತ್ತದೊಂದಿಗೆ ಮತ್ತಷ್ಟು ಹಣ ಸೇರಿಸಿ ಸಂಸ್ಥೆಗೆ ನೀಡಿದ್ದರು. ಸಂಸ್ಥೆಯ ಭಾಗಶಃ ಕೊಡುಗೆಯೊಂದಿಗೆ ಒಟ್ಟು ₹60 ಲಕ್ಷ ವೆಚ್ಚದಲ್ಲಿ ಬಸ್ ನಿರ್ಮಿಸಲಾಗಿದೆ. ದಿನಕ್ಕೆ 3–4 ಶಾಲೆಗಳಿಗೆ ಭೇಟಿ ನೀಡುವ ಯೋಜನೆಯಿದೆ. ವಾರ್ಷಿಕವಾಗಿ ₹10 ಲಕ್ಷ ಖರ್ಚು ಬರಬಹುದೆಂದು ಅಂದಾಜಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ತಿಳಿಸಿದರು.

‘ಕ್ಲಾಸ್ ಆನ್ ವೀಲ್ಸ್’ ಬಸ್‌ನ ಒಳ ಆವರಣವನ್ನು ತರಗತಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.