ADVERTISEMENT

ಮಂಗಳೂರು: ಒಂದೇ ಕೊಠಡಿಯಲ್ಲಿ 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ

ಬಲ್ಮಠ ಶಾಲೆ: ಹೊಸ ಕಟ್ಟಡ ನಿರ್ಮಿಸುವಂತೆ ಸಿಪಿಎಂ, ಡಿವೈಎಫ್‌ಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 8:47 IST
Last Updated 2 ಜುಲೈ 2022, 8:47 IST
ಬಲ್ಮಠ ಶಾಲೆಗೆ ನೂತನ ಕಟ್ಟಡ ಒದಗಿಸುವಂತೆ ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ ಅವರಿಗೆ ಸಂತೋಷ್‌ ಕುಮಾರ್‌, ನವೀನ್‌ ಕೊಮಚಾಡಿ, ಸುನಿಲ್‌ ಕುಮಾರ್‌ ಬಜಾಲ್‌ ಹಾಗೂ ವಿನೀತ್ ದೇವಾಡಿಗ ಅವರು ಮನವಿ ಸಲ್ಲಿಸಿದರು
ಬಲ್ಮಠ ಶಾಲೆಗೆ ನೂತನ ಕಟ್ಟಡ ಒದಗಿಸುವಂತೆ ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ ಅವರಿಗೆ ಸಂತೋಷ್‌ ಕುಮಾರ್‌, ನವೀನ್‌ ಕೊಮಚಾಡಿ, ಸುನಿಲ್‌ ಕುಮಾರ್‌ ಬಜಾಲ್‌ ಹಾಗೂ ವಿನೀತ್ ದೇವಾಡಿಗ ಅವರು ಮನವಿ ಸಲ್ಲಿಸಿದರು   

ಮಂಗಳೂರು: ’ಬಲ್ಮಠದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕ ಸಂಕಷ್ಟಕ್ಕೆ ಶಿಕ್ಷಣ ಇಲಾಖೆ ಸ್ಪಂದಿಸುತ್ತಿಲ್ಲ’ ಎಂದು ಸಿಪಿಎಂ, ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಟೀಕಿಸಿವೆ.

ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಕೋರಿ ಸಿಪಿಎಂ, ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ನಿಯೋಗವು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ ಅವರಿಗೆ ಮನವಿ ಸಲ್ಲಿಸಿತು.

‘ಶಿಕ್ಷಕರ ತರಬೇತಿ ಸಂಸ್ಥೆಯ ಮೂಲಕ 1912ರಲ್ಲಿ ಪ್ರಾರಂಭವಾದ ಈ ಶಾಲೆ ಶತಮಾನೋತ್ಸವವನ್ನು ಕಂಡಿದೆ. ನಗರದ ಹೃದಯಭಾಗದಲ್ಲಿರುವ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ಎಲ್ಲಾ 43 ವಿದ್ಯಾರ್ಥಿಗಳಿದ್ದಾರೆ. ಮೂರು ವರ್ಷಗಳಿಂದಲೂ ಒಂದೇ ಕೊಠಡಿಯಲ್ಲಿ ಪಾಠ ನಡೆಸಲಾಗುತ್ತಿದೆ’ ಎಂದು ಸಿಪಿಎಂ ಮುಖಂಡ ಸುನಿಲ್‌ ಕುಮಾರ್‌ ಬಜಾಲ್‌ ದೂರಿದ್ದಾರೆ.

ADVERTISEMENT

‘ಇಲ್ಲಿದ್ದ ಹಳೆಯ ಕಟ್ಟಡವನ್ನು‌ ಮೂರು ವರ್ಷಗಳ ಕೆಳಗೆ ನೆಲಸಮ ಮಾಡಿ ನೂತನ ಕಟ್ಟಡ ಮಾಡುವುದಾಗಿ ಶಿಕ್ಷಣ ಇಲಾಖೆ ಹೇಳಿತ್ತು. ಇಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಲಾಯಿತು. ಆದರೆ, ಪ್ರಾಥಮಿಕ ಶಾಲೆಗೆ ಈ ಭಾಗ್ಯ ಸಿಕ್ಕಿಲ್ಲ. ಈ ಶಾಲೆಗೆ ಹೊಸ ಕಟ್ಟಡ ಮರೀಚಿಕೆಯಾಗಿದೆ. ಕೊರೋನಾದಿಂದಾಗಿ ಎರಡು ವರ್ಷ ಕಳೆದು ಪ್ರಸ್ತುತ ಒಂದು ವರ್ಷದಲ್ಲಿ ಗಂಭೀರ ಸಮಸ್ಯೆಗಳು ಉದ್ಭವವಾಗಿದೆ. ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿದ ಭರವಸೆಗಳು ಗಗನ ಕುಸುಮವಾಗಿದೆ’ ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಕುಮಾರ್‌ ದೂರಿದರು.

‘ಈ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ 9 ವಿದ್ಯಾರ್ಥಿಗಳನ್ನು ಪೋಷಕರು ‌ಬೇರೆ ಶಾಲೆಗೆ ಸೇರಿಸಿದ್ದಾರೆ. ತರಗತಿಗೆ ಒಬ್ಬರಂತೆ 7 ಶಿಕ್ಷಕರು ಇರಬೇಕಾದ ಶಾಲೆಯಲ್ಲಿ ಕೇವಲ 3 ಶಿಕ್ಷಕರಿದ್ದಾರೆ. ಅವರಲ್ಲೂ ಒಬ್ಬರು ಅತಿಥಿ ಶಿಕ್ಷಕರು. ಮೂವರು ಶಿಕ್ಷಕರು 43 ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿರಿಸಿ ಪಾಠ ಮಾಡುವುದಾದರೂ ಹೇಗೆ. ಮಕ್ಕಳಲ್ಲಿ ಏಕಾಗ್ರತೆ ತರುವುದಾದರೂ ಹೇಗೆ. ಶೈಕ್ಷಣಿಕ ಕೇಂದ್ರವೆಂದು ಪ್ರಸಿದ್ದಿ ಪಡೆದ ಮಂಗಳೂರು ನಗರವನ್ನು ಸಾವಿರಾರು ಕೋಟಿ ರೂ.ಖರ್ಚು ಮಾಡಿ ಸ್ಮಾರ್ಟ್ ಸಿಟಿಯನ್ನಾಗಿ ಮಾಡುವಾಗ, ಇದೇ ನಗರದ ಹೃದಯ ಭಾಗದಲ್ಲಿರುವ ಬಲ್ಮಠದ ಸರ್ಕಾರಿ ಶಾಲೆಗೆ ನೂತನ ಕಟ್ಟಡವನ್ನು ಮಾಡಲು ಹಣವಿಲ್ಲವೇ. ಶಾಲೆಯೊಂದರ ಕರುಣಾಜನಕ ಸ್ಥಿತಿ ಶಾಸಕರಿಗೆ ತಿಳಿದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.