ADVERTISEMENT

ಮೂಡುಬಿದಿರೆ: ಅಳಿಯೂರಿನಲ್ಲಿ ತಗಡಿನ ಶೀಟ್‌ನಡಿ ಮಕ್ಕಳಿಗೆ ಪಾಠ

ಅಳಿಯೂರು ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:59 IST
Last Updated 19 ನವೆಂಬರ್ 2021, 15:59 IST
 ಮೂಡುಬಿದಿರೆ ಸಮೀಪದ ಅಳಿಯೂರಿನಲ್ಲಿ ತಗಡಿನ ಶೀಟ್‌ನಡಿ ಕುಳಿತು ಪಾಠ ಆಲಿಸುತ್ತಿರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು
 ಮೂಡುಬಿದಿರೆ ಸಮೀಪದ ಅಳಿಯೂರಿನಲ್ಲಿ ತಗಡಿನ ಶೀಟ್‌ನಡಿ ಕುಳಿತು ಪಾಠ ಆಲಿಸುತ್ತಿರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು   

ಮೂಡುಬಿದಿರೆ: ಕೊಠಡಿಗಳ ಕೊರತೆಯಿಂದಾಗಿ ತಾಲ್ಲೂಕಿನ ಅಳಿಯೂರಿನಲ್ಲಿ ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ತಗಡಿನ ಶೀಟ್‌ನಡಿ ಕೂರಿಸಿ, ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಅಳಿಯೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 325 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ಹೀಗಾಗಿ 4 ಮತ್ತು 7ನೇ ತರಗತಿ ಮಕ್ಕಳು ಶಾಲೆಯ ಹೊರಾಂಗಣದಲ್ಲಿ ತಗಡಿನ ಶೀಟ್‌ನಡಿ ಪಾಠ ಕೇಳುತ್ತಿದ್ದಾರೆ. ಶೀಟ್‌ಗಳನ್ನು ಹಾಕಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ತರಗತಿ ಕೋಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬಿಸಿಲು ಮಳೆ, ಗಾಳಿಯಿಂದ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಸಿಲು ಇದ್ದಾಗ ವಿಪರೀತ ಸೆಕೆ ಮತ್ತು ಮಳೆಯಾದಾಗ ನೀರಿನಲ್ಲಿ ನೆನೆಯಬೇಕಾದ ಸಂಕಷ್ಟವನ್ನು ವಿದ್ಯಾರ್ಥಿಗಳು ಎದುರಿಸಬೇಕಾಗಿದೆ.

ಶಾಲೆಗೆ ಎರಡು ಹೊಸ ಕೊಠಡಿಗಳ ನಿರ್ಮಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ಇತ್ತೀಚೆಗೆ ಮಂಜೂರಾತಿ ಲಭಿಸಿದೆ. ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದ್ದು, ಗುತ್ತಿಗೆದಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಲೋಪ ಇದ್ದಿದ್ದರಿಂದ ಈ ಟೆಂಡರ್ ರದ್ದಾಗಿದೆ. ಹೀಗಾಗಿ ಮತ್ತೊಮ್ಮೆ ಟೆಂಡರ್ ಕರೆಯಬೇಕಾಗಿದೆ. ಟೆಂಡರ್‌ ಅಂತಿಮಗೊಂಡು, ಕಾಮಗಾರಿ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳು ಕೊಠಡಿ ಭಾಗ್ಯ ಇಲ್ಲದೆ ತಗಡಿನ ಶೀಟ್‌ನಡಿ ಪಾಠ ಕೇಳಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.