ADVERTISEMENT

ಹವಾಮಾನ ವೈಪರೀತ್ಯ: ವಿಮಾನ ಬೇರೆಡೆಗೆ

ಜಿಲ್ಲೆಯಲ್ಲಿ ಉತ್ತಮ ಮಳೆ: ಮೂರು ದಿನ ಮುಂದುವರಿಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 16:15 IST
Last Updated 16 ಮೇ 2022, 16:15 IST
ಮಂಗಳೂರಿನಲ್ಲಿ ಸೋಮವಾರ ಮಳೆಗೆ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳು – ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಸೋಮವಾರ ಮಳೆಗೆ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳು – ಪ್ರಜಾವಾಣಿ ಚಿತ್ರ   

ಮಂಗಳೂರು: ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ಮೂರು ವಿಮಾನಗಳನ್ನು ಸೋಮವಾರ ಬೇರೆಡೆ ಕಳುಹಿಸಲಾಗಿದೆ.

ಬೆಳಿಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದ್ದು, ಸಂಜೆ 5 ಗಂಟೆಯ ಬಳಿಕ ನಿರಂತರವಾಗಿ ಮಳೆ ಸುರಿಯಿತು. ತಡರಾತ್ರಿಯವರೆಗೂ ಒಂದೇ ರೀತಿಯಿಂದ ಮಳೆ ಬಂದಿದ್ದರಿಂದ ರಸ್ತೆಗಳಲ್ಲಿ ನೀರು ಹರಿಯಿತು.

ದಟ್ಟವಾದ ಮೋಡ ಹಾಗೂ ನಿರಂತರ ಮಳೆಯಿಂದಾಗಿ ಮಸ್ಕತ್‌– ಬೆಂಗಳೂರು– ಮಂಗಳೂರು ವಿಮಾನ
ವನ್ನು ಕೊಚ್ಚಿನ್‌ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ಬೆಂಗಳೂರು–ಮಂಗಳೂರು ವಿಮಾನವನ್ನು ಕೊಯ
ಮತ್ತೂರು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ಹುಬ್ಬಳ್ಳಿಯಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನವನ್ನು ಮತ್ತೆ ಹುಬ್ಬಳ್ಳಿಗೆ ವಾಪಸ್‌ ಕಳುಹಿಸಲಾಯಿತು.

ADVERTISEMENT

ಇಲ್ಲಿನದ್ದು ಹಿಲ್‌ಟಾಪ್‌ ವಿಮಾನ ನಿಲ್ದಾಣವಾಗಿದ್ದು, ಬೆಳಕಿನ ಕೊರತೆಯಿಂದಾಗಿ ವಿಮಾನವನ್ನು ಇಳಿಸುವುದು ಕಷ್ಟದ ಕೆಲಸ. ಹೀಗಾಗಿ ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ಕಳುಹಿಸಲಾಗಿದೆ. ಈ ಮೂರು ವಿಮಾನಗಳು ಸಂಜೆ 4.45 ರಿಂದ 6 ಗಂಟೆಯ ಅವಧಿಯಲ್ಲಿ ಸುರಕ್ಷಿತವಾಗಿ ಆಯಾ ನಿಲ್ದಾಣಗಳಲ್ಲಿ ಇಳಿದಿವೆ. ಮಂಗಳೂರಿನಲ್ಲಿ ವಾತಾವರಣ ಸರಿಯಾದ ನಂತರ ಇಲ್ಲಿಗೆ ಬರಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.

ನಾಳೆ ರೆಡ್ ಅಲರ್ಟ್‌: ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮೇ 17 ಮತ್ತು 19 ರಂದು ಆರೆಂಜ್‌ ಅಲರ್ಟ್‌ ಹಾಗೂ ಮೇ 18 ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ನೀರು ಇರುವ ತೆಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಪ್ರವಾಸಿಗರು, ಸಾರ್ವಜನಿಕರು ನದಿ ತೀರ, ಸಮುದ್ರ ತೀರಕ್ಕೆ ತೆರಳಬಾರದು ಎಂದು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.