ADVERTISEMENT

ಮುಖ್ಯಮಂತ್ರಿ ರಾಜೀನಾಮೆಗೆ ಐವನ್‌ ಡಿಸೋಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 10:11 IST
Last Updated 5 ನವೆಂಬರ್ 2019, 10:11 IST
ಐವನ್‌ ಡಿಸೋಜ
ಐವನ್‌ ಡಿಸೋಜ   

ಮಂಗಳೂರು: ‘ಆಪರೇಷನ್‌ ಕಮಲ’ದ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ರಾಜೀನಾಮೆ ಕೊಡಿಸಿರುವುದನ್ನು ಒಪ್ಪಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಆಗ್ರಹಿಸಿದರು.

ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೂಡಿ ನಮ್ಮ ಪಕ್ಷಗಳ ಶಾಸಕರನ್ನು ಆಮಿಷವೊಡ್ಡಿ ರಾಜೀನಾಮೆ ಕೊಡಿಸಿದ್ದಾರೆ. ಯಡಿಯೂರಪ್ಪ ಅವರೇ ಒಪ್ಪಿಕೊಂಡಿರುವ ಆಡಿಯೊ ಈಗ ಸುಪ್ರೀಂಕೋರ್ಟ್‌ ಮುಂದಿದೆ. ಇನ್ನು ಅವರು ಅಧಿಕಾರದಲ್ಲಿ ಮುಂದುವರಿಯಬಾರದು’ ಎಂದರು.

ಆಡಿಯೊದಲ್ಲಿರುವ ಧ್ವನಿ ತನ್ನದೇ ಎಂದು ಯಡಿಯೂರಪ್ಪ ಅವರು ಮೊದಲು ಒಪ್ಪಿಕೊಂಡಿದ್ದರು. ಈಗ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ. ಆಡಿಯೊ ಬಹಿರಂಗವಾದ ಬಳಿಕ ಗಲಿಬಿಲಿಗೊಂಡಿರುವ ಅವರು ತಮ್ಮನ್ನು ಭೇಟಿ ಮಾಡಲು ಬರುವವರು ಮೊಬೈಲ್‌ ತರದಂತೆ ನಿರ್ಬಂಧ ಹೇರಿದ್ದಾರೆ ಎಂದು ಟೀಕಿಸಿದರು.

ADVERTISEMENT

2008ರಲ್ಲಿ ಕೂಡ ಬಿಜೆಪಿ ಆಪರೇಷನ್‌ ಕಮಲದ ಮೂಲಕ ವಿರೋಧ ಪಕ್ಷಗಳ ಶಾಸಕರನ್ನು ಸೆಳೆದುಕೊಂಡಿತ್ತು. 2018ರಲ್ಲೂ ಅದನ್ನೇ ಮಾಡುತ್ತಿದೆ. ಆಪರೇಷನ್‌ ಕಮಲ ನಡೆಸುತ್ತಿಲ್ಲ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದರು. ಈಗ ಅವರ ನಿಜ ಬಣ್ಣ ಬಯಲಾಗಿದೆ ಎಂದರು.

ನೀರಿನ ದರ ಹೆಚ್ಚಿಸಿದ್ದು ಬಿಜೆಪಿ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹಬಳಕೆಯ ನೀರಿನ ದರ ಹೆಚ್ಚಳ ಮಾಡಿರುವುದಕ್ಕೆ ಬಿಜೆಪಿಯೇ ಕಾರಣ. ಈಗ ಚುನಾವಣೆಯಲ್ಲಿ ಹಿನ್ನಡೆ ಆಗುತ್ತದೆ ಎಂಬ ಕಾರಣಕ್ಕೆ ಶಾಸಕ ಡಿ.ವೇದವ್ಯಾಸ ಕಾಮತ್‌ ಸುಳ್ಳು ಹೇಳುತ್ತಿದ್ದಾರೆ ಎಂದು ಐವನ್‌ ದೂರಿದರು.

‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗೃಹ ಬಳಕೆಯ ನೀರಿನ ದರ ಹೆಚ್ಚಳ ಮಾಡುವ ನಿರ್ಧಾರವನ್ನು 2011ರಲ್ಲಿ ಬಿಜೆಪಿ ಸರ್ಕಾರವೇ ಕೈಗೊಂಡಿತ್ತು.ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಆಡಳಿತ ಇದ್ದ ಕಾರಣ ಅದನ್ನು ಜಾರಿಗೊಳಿಸಿರಲಿಲ್ಲ. ಈಗ ಆಡಳಿತಾಧಿಕಾರಿಗಳು ದರ ಹೆಚ್ಚಳದ ನಿರ್ಧಾರ ಜಾರಿ ಮಾಡಿದ್ದಾರೆ. ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ.ವೈ.ಭರತ್‌ ಶೆಟ್ಟಿ ಏಕೆ ಅದರ ವಿರುದ್ಧ ಧ್ವನಿ ಎತ್ತಿರಲಿಲ್ಲ. ಈಗ ಏಕೆ ಮಾತನಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ವಾರ್ಡ್‌ಗಳಲ್ಲಿ ಬಿಜೆಪಿಯು ಅಲ್ಪಸಂಖ್ಯಾತರನ್ನೇ ಪಕ್ಷೇತರರನ್ನಾಗಿ ಕಣಕ್ಕಿಳಿಸಿದೆ. ಮತ ವಿಭಜನೆಯ ತಂತ್ರಗಾರಿಕೆಯ ಭಾಗವಾಗಿ ಈ ಕೆಲಸ ಮಾಡಿದೆ. 60 ವಾರ್ಡ್‌ಗಳಲ್ಲಿ ಬಿಜೆಪಿ 90 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೂ, ಕಾಂಗ್ರೆಸ್‌ 45ರಿಂದ 50 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.