ADVERTISEMENT

ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್: ಮಧು ಬಂಗಾರಪ್ಪ

ಬಂಗಾರಪ್ಪ ಸೇರಿದ್ದ ಕಾರಣಕ್ಕೆ ಕರಾವಳಿಯಲ್ಲಿ ಬಿಜೆಪಿಗೆ ಬಲ ಬಂದಿತ್ತು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 15:31 IST
Last Updated 5 ಜುಲೈ 2022, 15:31 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಮಂಗಳೂರು: ‘ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿಗೆ ಸೇರಿದ್ದ ಕಾರಣಕ್ಕೆ ಕರಾವಳಿಯಲ್ಲಿ ಈ ಪಕ್ಷಕ್ಕೆ ಬಲ ಬಂದಿತ್ತು. ಆದರೆ, ಬಿಜೆಪಿ ಸಂಗ ಮಾಡಿದ ಜನರಿಗೆ ಈಗ ಸತ್ಯದ ಅರಿವಾಗುತ್ತಿದೆ. ಹೀಗಾಗಿ, ಕರಾವಳಿಯಲ್ಲಿ ಕಾಂಗ್ರೆಸ್ ಮತ್ತೆ ಉದಯವಾಗುವುದು ನಿಶ್ಚಿತ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿವಂಗತ ಎಸ್. ಬಂಗಾರಪ್ಪ ಅವರು 2004ರಲ್ಲಿ ಬಿಜೆಪಿ ಸೇರಿದ್ದರು. ಆಗ ಕರಾವಳಿಯ ಬಿಲ್ಲವರು, ಬಂಗಾರಪ್ಪ ಅಭಿಮಾನಿಗಳು ಬಿಜೆಪಿಗೆ ಸೇರಿದ್ದರು. ಆ ಪಕ್ಷದ ಸಿದ್ಧಾಂತ ಒಪ್ಪಿಗೆಯಾಗದೆ, ಕೇವಲ ಒಂಬತ್ತು ತಿಂಗಳಲ್ಲಿ ಅವರು ಪಕ್ಷದಿಂದ ಹೊರಬಂದಿದ್ದರು. ಆದರೆ, ಅವರು ಕಾಂಗ್ರೆಸ್‌ಗೆ ಮರಳದೆ, ಸಮಾಜವಾದಿ ಪಕ್ಷ ಕಟ್ಟಿದ್ದರು. ಹೀಗಾಗಿ, ಅನೇಕರು ಪುನಃ ಕಾಂಗ್ರೆಸ್‌ಗೆ ಬಂದಿರಲಿಲ್ಲ’ ಎಂದರು.

‘ರೈತರಿಗೆ ಉಚಿತ ವಿದ್ಯುತ್, ಅಕ್ರಮ–ಸಕ್ರಮ, ಬಗರ್‌ಹುಕುಂ, ಆಶ್ರಯಮನೆ ಸೇರಿದಂತೆ ಬಂಗಾರಪ್ಪ ಹಾಗೂ ಕಾಂಗ್ರೆಸ್‌ ಪಕ್ಷ ಅನುಷ್ಠಾನಗೊಳಿಸಿದ್ದ ಅನೇಕ ಜನಪರ ಕಾರ್ಯಕ್ರಮಗಳನ್ನು ಜನರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಬಿಜೆಪಿ ಆಡಳಿತದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವವರು ಇಲ್ಲ. ಈಗಿನ ಭಾರತೀಯ ಜನತಾ ಪಾರ್ಟಿಯು ವ್ಯಾವಹಾರಿಕವಾಗಿದ್ದು, ಬ್ರಿಟಿಷ್ ಜನತಾ ಪಾರ್ಟಿ ಆಗಿ ಪರಿವರ್ತನೆಯಾಗಿದೆ. ಇಂತಹ ಪಕ್ಷವು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದೆ, ಅಂಬೇಡ್ಕರ್ ಚಿಂತನೆಯನ್ನೇ ಬದಲಾಯಿಸಲು ಹೊರಟಿದೆ’ ಎಂದು ಆರೋಪಿಸಿದರು.

ADVERTISEMENT

‘ಕರಾವಳಿ ಕೋಮು ಸಂಘರ್ಷ, ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸುತ್ತಿದೆ. ಬಿಜೆಪಿಯ ಅಂಗ ಸಂಸ್ಥೆಯ ಕಾರ್ಯಕರ್ತರು ನಾಟಕವೊಂದರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಾರೆ. ಇಂತಹ ಕೋಮು ಸಂಘರ್ಷಗಳಿಗೆ ನಮ್ಮ ಜಿಲ್ಲೆಯಲ್ಲಿ ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಅಭಿಯಾನದ ವೇಳೆ ಪ್ರತಿ ಮನೆಗೆ ಭೇಟಿ ನೀಡಿ, ಜನರನ್ನು ನೇರವಾಗಿ ತಲುಪುತ್ತಿದ್ದೇವೆ. ಇದು ಚುನಾವಣೆಯ ವೇಳೆ ಪಕ್ಷದ ಮೇಲೆ ಪೂರಕವಾಗಿ ಪರಿಣಾಮ ಬೀರುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಮಾಜಿ ಶಾಸಕ ಜೆ.ಆರ್‌.ಲೋಬೊ, ಕಾಂಗ್ರೆಸ್‌ ಪ್ರಮುಖರಾದ ಶಶಿಧರ ಹೆಗ್ದೆ, ಟಿ.ಕೆ. ಸುಧೀರ್, ಪ್ರಕಾಶ ಸಾಲ್ಯಾನ್, ಶುಭೋದಯ ಆಳ್ವ, ಪಕ್ಷದ ಜಿಲ್ಲಾ ಚುನಾವಣಾಧಿಕಾರಿ ಜಯಚಂದ್ರನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.