ADVERTISEMENT

ಕರಾವಳಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ: ಶಾಸಕರ ಒಕ್ಕೊರಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:31 IST
Last Updated 13 ಫೆಬ್ರುವರಿ 2026, 7:31 IST
ಮಂಗಳೂರಿನಲ್ಲಿ ಗುರುವಾರ ಏರ್ಪಡಿಸಿದ್ದ ಕರಾವಳಿ ಅಭಿವೃದ್ಧಿ ಮಂಡಳಿ ಸದಸ್ಯರ ಸಭೆಯಲ್ಲಿ ದರ್ಶನ್ ಎಚ್‌.ವಿ., ಮಂಕಾಳ ಎಸ್ ವೈದ್ಯ, ಯು.ಟಿ.ಖಾದರ್‌, ಎಂ.ಎ.ಗಫೂರ್‌ ಹಾಗೂ ಪ್ರದೀಪ್ ಡಿಸೋಜ ಭಾಗವಹಿಸಿದ್ದರು
ಮಂಗಳೂರಿನಲ್ಲಿ ಗುರುವಾರ ಏರ್ಪಡಿಸಿದ್ದ ಕರಾವಳಿ ಅಭಿವೃದ್ಧಿ ಮಂಡಳಿ ಸದಸ್ಯರ ಸಭೆಯಲ್ಲಿ ದರ್ಶನ್ ಎಚ್‌.ವಿ., ಮಂಕಾಳ ಎಸ್ ವೈದ್ಯ, ಯು.ಟಿ.ಖಾದರ್‌, ಎಂ.ಎ.ಗಫೂರ್‌ ಹಾಗೂ ಪ್ರದೀಪ್ ಡಿಸೋಜ ಭಾಗವಹಿಸಿದ್ದರು   

ಮಂಗಳೂರು: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ, ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಬೇಕು ಎಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರು ಒಕ್ಕೊರಲಿನಿಂದ ಒತ್ತಾಯಿಸಿದರು.

ಕರಾವಳಿಯ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಬೇಡಿಕೆಗೆ ಸಂಬಂಧಿಸಿದಂತೆ ಚರ್ಚಿಸಲು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕರಾವಳಿ ಅಭಿವೃದ್ಧಿ ಮಂಡಳಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ‘ಕಡಲ್ಕೊರೆತ ನಿಯಂತ್ರಣಕ್ಕೆ ತೀರ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಎತ್ತರದಲ್ಲಿ ನಿರ್ಮಿಸಬೇಕು. ಇದು ಸಂಚಾರ ವ್ಯವಸ್ಥೆ ಸುಧಾರಣೆಗೆ ಹಾಗೂ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ’ ಎಂದರು.

ADVERTISEMENT

‘ಪಶ್ಚಿಮ ವಾಹಿನಿ ಯೋಜನೆಗೆ ಇನ್ನಷ್ಟು ಅನುದಾನದ ಅಗತ್ಯವಿದೆ. ಉಳ್ಳಾಲ, ಕೋಟೆಪುರ ಜೆಟ್ಟಿ ನಿರ್ಮಾಣದಿಂದ ಮಂಗಳೂರು ಹಳೆಬಂದರಿನ ಮೇಳೆ ಒತ್ತಡ ಕಡಿಮೆಯಾಗಲಿದೆ’ ಎಂದರು.

ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ‘ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ಪ್ರಾಧಿಕಾರದ ಕಚೇರಿಯನ್ನು ಬೆಂಗಳೂರಿನಿಂದ ಮಂಗಳೂರು ಅಥವಾ ಉಡುಪಿಗೆ ಸ್ಥಳಾಂತರಿಸಬೇಕು. ಸಿಆರ್‌ಜೆಡ್ ಅನುಮತಿಗೆ ದೀರ್ಘಕಾಲ ಕಾಯುವುದು ಇದರಿಂದ ತಪ್ಪಲಿದೆ. ಬ್ರಹ್ಮಾವರದ ಕೃಷಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಬೇಕು’ ಎಂದು ಸಲಹೆ ನೀಡಿದರು.

ಉಡುಪಿ ಶಾಸಕ ಯಶಪಾಲ ಸುವರ್ಣ, ‘ಮೀನುಗಾರಿಕೆ ಮತ್ತು ಬಂದರು ಇಲಾಖೆಗಳನ್ನು ವಿಲೀನಗೊಳಿಸಿ, ಎಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸಬೇಕು. ಇದರಿಂದ ಬಂದರುಗಳ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದೆ. ಮೀನುಗಾರಿಕೆ ರಜೆಯೂ ಸೇರಿದಂತೆ ಒಂದೊಂದು ರಾಜ್ಯದಲ್ಲಿ ವಿಭಿನ್ನ ಮೀನುಗಾರಿಕಾ ನೀತಿಗಳು ಜಾರಿಯಲ್ಲಿವೆ. ಇದರಿಂದ ಮೀನುಗಾರರಿಗೆ ಆಗುವ ತೊಂದರೆ ತಪ್ಪಿಸಲು ಪಶ್ಚಿಮ ಕರಾವಳಿಯುದ್ದಕ್ಕೂ ಏಕರೂಪದ ನೀತಿ ಜಾರಿಯಾಗಬೇಕು’ ಎಂದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ‘ಪ್ರವಾಸೋದ್ಯಮ ಉತ್ತೇಜನಕ್ಕೆ ವಾಟರ್ ಮೆಟ್ರೊ  ಜಾರಿಗೊಳಿಸಬೇಕು.  ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ‘ಕರಾವಳಿಯಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗದ ಉನ್ನತ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ವಿವಿಧೆಡೆಯ ವಿದ್ಯಾರ್ಥಿಗಳು ಕರಾವಳಿಯಲ್ಲಿ ಕಲಿಯುತ್ತಿರುವುದರಿಂದ ಇಲ್ಲಿ ವಿದ್ಯಾರ್ಥಿನಿಲಯಗಳನ್ನು ಹೆಚ್ಚಿಸಬೇಕು’ ಎಂದರು. 

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ‘ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜನ್ನು ಮುಂದಿನ ಬಜೆಟ್‍ನಲ್ಲಿ ಪ್ರಕಟಿಸಬೇಕು. ಕೊಲ್ಯದ ಪಶುಸಂಗೋಪನಾ ಕಾಲೇಜಿಗೆ ಬೋಧಕ ಹುದ್ದೆಗಳನ್ನು ಮಂಜೂರುಗೊಳಿಸಬೇಕು. ಕಡಬ ತಾಲ್ಲೂಕಾದರೂ ಕಚೇರಿಗಳು ಆರಂಭವಾಗಿಲ್ಲ’ ಎಂದು ಗಮನ ಸೆಳೆದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ‘ಕರಾವಳಿಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿ ಇಲ್ಲಿ ಚರ್ಚೆಯಾದ ಅಂಶಗಳನ್ನು ಮಂಡಳಿಯ ಕ್ರಿಯಾಯೋಜನೆಯಲ್ಲಿ ಸೇರಿಸಿ, ಅನುದಾನಕ್ಕೆ ಬೇಡಿಕೆ ಸಲ್ಲಿಸುತ್ತೇವೆ’ ಎಂದರು.   

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಮಂಡಳಿಯ ಅಧಿಕಾರಿಗಳಾದ ಮಂಜುನಾಥ ಶೆಟ್ಟಿ, ಶ್ರೀಧರ್ ಟಿ.ಡಿ. ಮುಹಮ್ಮದ್ ತೌಸೀಫ್, ಹರಿಹರ ವಿ. ಹರಿಕಾಂತ್, ಪವನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

‘ಯಂತ್ರ ಖರೀದಿಸಿ ಸರ್ಕಾರವೇ ಹೂಳೆತ್ತಲಿ’

‘ಅಳಿವೆಗಳ ಹೂಳೆತ್ತುವ ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆ ವಿಳಂಬವಾಗುತ್ತಿದೆ.  ಗುತ್ತಿಗೆ ನೀಡುವ ಬದಲು ರಾಜ್ಯ ಸರ್ಕಾರವೇ ಡ್ರೆಜ್ಜಿಂಗ್ ಯಂತ್ರ ಖರೀದಿಸಿ ಹೂಳೆತ್ತಬೇಕು’ ಎಂದು ಶಾಸಕ ಯಶಪಾಲ ಸುವರ್ಣ ಸಲಹೆ ನೀಡಿದರು.  ಶಾಸಕ ಭರತ್ ಶೆಟ್ಟಿ ‘ನಗರದಲ್ಲಿ ರಾಜಾ ಕಾಲುವೆಗಳು ನದಿಯನ್ನು ಸೇರುವಲ್ಲಿ  ಹೂಳೆತ್ತದ ಕಾರಣ ಮಳೆಗಾಲದಲ್ಲಿ ನೆರೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಕರಾವಳಿಯ 3 ಜಿಲ್ಲೆಗಳ 13 ಮೀನುಗಾರಿಕಾ ಬಂದರುಗಳ ವ್ಯಾಪ್ತಿಗಳಲ್ಲಿ ಹೂಳೆತ್ತಲು ₹ 70 ಕೋಟಿಯ ಯೋಜನೆ ರೂಪಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದು ಅನುದಾನ ಸಿಗುವ ನಿರೀಕ್ಷೆ ಇದೆ
-ಮಂಕಾಳ ಎಸ್. ವೈದ್ಯ, ಮೀನುಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.