ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಸಮುದ್ರ ತೀರದಲ್ಲಿ ಸೋಮೇಶ್ವರದಿಂದ ಸಸಿಹಿತ್ಲುವರೆಗೆ 24 ಅಡಿ ಅಗಲದ ಕೋಸ್ಟಲ್ ರೋಡ್ ನಿರ್ಮಾಣಕ್ಕೆ ಯೋಚಿಸಲಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಮಾಸ್ಟರ್ ಪ್ಲಾನ್‌ನಲ್ಲಿ ಇದನ್ನು ಸೇರ್ಪಡೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಸ್ಟರ್ ಪ್ಲಾನ್‌ಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಯೋಜನೆ ಜಾರಿಗೆ ಕ್ರಮವಾಗುತ್ತದೆ’ ಎಂದರು.
ಮಂಗಳೂರು ಅಂತರರಾಷ್ಟ್ರೀಯ ಮಟ್ಟದ ನಗರವಾಗಿ ಬೆಳವಣಿಗೆ ಹೊಂದು ಅರ್ಹತೆ ಹೊಂದಿದೆ. ಬೆಂಗಳೂರಿನ ನಂತರ ಮಂಗಳೂರು ಮತ್ತು ಮೈಸೂರು ನಗರಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇಲ್ಲಿನ ಪ್ರವಾಸೋದ್ಯಮ ಬೆಳವಣಿಗೆ, ಹೂಡಿಕೆದಾರರನ್ನು ಆಕರ್ಷಿಸಲು ಕೋಸ್ಟಲ್ ರೋಡ್‌ನಂತಹ ಯೋಜನೆ ಪೂರಕವಾಗಲಿದೆ ಎಂದರು.
ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಂಗಳೂರು ಅಭಿವೃದ್ಧಿ ಹೊಂದಿದರೆ, ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಬೆಂಗಳೂರಿನ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದೆ. ಮಂಗಳೂರಿನ ದೇರೆಬೈಲ್ ಬ್ಲೂಬೆರಿ ಹಿಲ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ಉದ್ದೇಶಿತ ಐಟಿ ಪಾರ್ಕ್ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ವಿನಯರಾಜ್, ನವೀನ್ ಡಿಸೋಜ, ಅನಿಲ್‌ಕುಮಾರ್, ಪ್ರವೀಣ್‌ಚಂದ್ರ ಆಳ್ವ ಇದ್ದರು.
ಮೂಡಾ ಹಾಗೂ ಮಹಾನಗರ ಪಾಲಿಕೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಸಚಿವರು ಅಧಿಕಾರಿಗಳ ಸಭೆ ನಡೆಸಿದರು.
ನವೆಂಬರ್‌ನಲ್ಲಿ ಪೂರ್ಣಗೊಳಿಸಲು ಸೂಚನೆ
ಮೂಡಾದಿಂದ ನಿರ್ಮಾಣವಾಗುತ್ತಿರುವ ಮೂರು ಬಡಾವಣೆಗಳಲ್ಲಿ ಕೊಣಾಜೆ ಬಡಾವಣೆ ಮುಕ್ತಾಯದ ಹಂತದಲ್ಲಿದ್ದು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೇ 20ರಷ್ಟು ನಿವೇಶನ ಮಾರಾಟವಾಗಿದ್ದು ಆದಷ್ಟು ಬೇಗ ಖರೀದಿದಾರರಿಗೆ ಲಭ್ಯವಾಗುವಂತೆ ಮಾಡಿದರೆ ಇಲ್ಲಿಂದ ಬಂದ ಆದಾಯ ಬಳಸಿಕೊಂಡು ಚೇಳಾಯ್ರು ಬಡಾವಣೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಂಜತ್ತಬೈಲ್ ಬಡಾವಣೆಗೆ ಅವೈಜ್ಞಾನಿಕವಾಗಿ ವೆಚ್ಚ ಮಾಡಲಾಗಿದ್ದು ಈ ಬಗ್ಗೆ ಏನು ಮಾಡಬಹುದೆಂದು ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದರು.
ಜನರ ಕೆಲಸವನ್ನು ವಿಳಂಬವಿಲ್ಲದೆ ಮಾಡಿಕೊಡಬೇಕು. ವಿನಾಕಾರಣ ಜನರನ್ನು ಕಚೇರಿಗೆ ಅಲೆದಾಡಿಸುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.–ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.