ಮಂಗಳೂರು: ನಗರದ ಎಮ್ಮೆಕೆರೆಯಲ್ಲಿ ನಿರ್ಮಿಸಿದ ಸುಸಜ್ಜಿತ ಈಜುಕೊಳದಲ್ಲಿ ತರಬೇತಿ ನೀಡಲು ಬೆಂಗಳೂರಿನ ಬಸವನಗುಡಿ ಈಜುಕೇಂದ್ರ ಉತ್ಸಾಹ ತೋರಿದ್ದು ಕರಾವಳಿಯ ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿ ಈಚೆಗೆ ನಡೆದ ಮಹತ್ವದ ಬೆಳವಣಿಗೆ ಆಗಿತ್ತು. ಇದರ ಬೆನ್ನಲ್ಲೇ ನಗರದಲ್ಲಿ ಫುಟ್‌ಬಾಲ್, ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೊಸ ಬೆಳಕು ಮೂಡಿದೆ.
ಉರ್ವದಲ್ಲಿ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಕ್ರೀಡಾಸಂಕೀರ್ಣ ಸಿದ್ಧಗೊಂಡಿದ್ದು ನೆಹರು ಮೈದಾನದ ಫುಟ್‌ಬಾಲ್ ಅಂಗಣಕ್ಕೆ ಟರ್ಫ್ ಅಳವಡಿಸುವ ಬಹುಕಾಲದ ಕನಸು ನನಸಾಗುತ್ತಿದೆ. ಕೆಲವೇ ದಿನಗಳಲ್ಲಿ ಆ್ಯಸ್ಟ್ರೊ ಟರ್ಫ್‌ನೊಂದಿಗೆ ಅಂಗಣ ಕಂಗೊಳಿಸಲಿದ್ದು ಆಟಗಾರರ ಸಾಮರ್ಥ್ಯದ ಮಟ್ಟ ಹೊಸ ಆಯಾಮ ಪಡೆದುಕೊಳ್ಳಲಿದೆ. ಇದೆಲ್ಲವೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎದ್ದುನಿಲ್ಲುತ್ತಿರುವ ಸೌಲಭ್ಯಗಳು.
ನಗರ ಮಧ್ಯದಲ್ಲಿದ್ದರೂ ನೆಹರು ಮೈದಾನದ ಅಭಿವೃದ್ಧಿ ಅಷ್ಟಕ್ಕಷ್ಟೆ. ಅಲ್ಲಿನ ಫುಟ್‌ಬಾಲ್ ಅಂಗಣವಂತೂ ಕಲ್ಲು–ಮಣ್ಣು ತುಂಬಿದ್ದರಿಂದ ಆಟಗಾರರಿಗೆ ಗಾಯದ ‘ಕೊಡುಗೆ’ಯನ್ನೇ ಹೆಚ್ಚಾಗಿ ನೀಡುತ್ತಿತ್ತು. ಹೀಗಾಗಿ ಟರ್ಫ್ ಅಳವಡಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ನಗರ ಸುತ್ತಮುತ್ತಲ ಕೆಲವು ಖಾಸಗಿ ಕಾಲೇಜುಗಳಲ್ಲಿ ಸಹಜ ಅಥವಾ ಆ್ಯಸ್ಟ್ರೊ ಟರ್ಫ್ ಅಳವಡಿಸಿರುವ ಅಂಗಣಗಳು ಇವೆ. ನೆಹರು ಮೈದಾನದಲ್ಲೂ ಟರ್ಫ್ ಸೌಲಭ್ಯ ಬಂದ ನಂತರ ಇಲ್ಲಿನ ಆಟಗಾರರು ರಾಜ್ಯಮಟ್ಟದಲ್ಲಿ ಮಿಂಚಲು ಸಾಧ್ಯವಾಗಲಿದೆ.
ನೆಹರು ಮೈದಾನದ ಫುಟ್‌ಬಾಲ್ ಅಂಗಣದ ವಿಸ್ತಾರವೂ ಹೆಚ್ಚಾಗಲಿದೆ. 100 ಮೀಟರ್ಸ್ ಉದ್ದ ಮತ್ತು 70 ಮೀಟರ್ಸ್ ಅಗಲದಲ್ಲಿ ಟರ್ಫ್ ಹಾಸುತ್ತಿದ್ದು ಪ್ರಮುಖ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗಲಿದೆ.
‘ಟರ್ಫ್ ಹಾಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿತ್ತು. 2016ರಲ್ಲಿ ಇದಕ್ಕಾಗಿ ₹ 1 ಕೋಟಿ ಬಿಡುಗಡೆ ಆಗಿತ್ತು. ಕಾಮಗಾರಿ ಕೈಗೊಳ್ಳಬೇಕಾಗಿದ್ದ ಇಲಾಖೆಯ ವರೆಗೂ ಆ ಹಣ ತಲುಪಿತ್ತು. ಆದರೆ ಅಲ್ಲೇ ಉಳಿದ ಕಾರಣ ಅಂಗಣದ ಅಭಿವೃದ್ಧಿ ಕಾರ್ಯ ನಡೆಯಲೇ ಇಲ್ಲ. ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಟರ್ಫ್ ಹಾಸುತ್ತಿದ್ದು ಬೇರೆ ಜಿಲ್ಲೆಗಳಿಗೆ ಹೋಗಿ ಟೂರ್ನಿಗಳಲ್ಲಿ ಆಡುವವರಿಗೆ ಇಲ್ಲಿನ ಅಭ್ಯಾಸ ಸಹಕಾರಿ ಆಗಲಿದೆ’ ಎಂದು ಹೇಳುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಾಂ.
‘ಮಣ್ಣಿನ ಅಂಗಣದಲ್ಲಿ ಆಡುತ್ತಿದ್ದ ಕಾರಣ ಇಲ್ಲಿನ ಬಹುತೇಕ ಆಟಗಾರರು ಬೇರೆ ಜಿಲ್ಲೆಗಳಲ್ಲಿ, ವಿಶೇಷವಾಗಿ ಮಹಾನಗರಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದರು. ಇನ್ನು ಮುಂದೆ ಅಂಥ ಆತಂಕ ಇರುವುದಿಲ್ಲ’ ಎಂದು ಅವರು ಹೇಳುತ್ತಾರೆ.
ಬಹುಮಹಡಿಯಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕಬಡ್ಡಿ ಉತ್ತುಂಗದಲ್ಲಿದೆ. ಬ್ಯಾಡ್ಮಿಂಟನ್ ಆಸಕ್ತರ ಸಂಖ್ಯೆಯೂ ಕಡಿಮೆಯೇನಿಲ್ಲ. ಅನೇಕ ಕ್ಲಬ್‌ಗಳು ಮತ್ತು ಅಕಾಡೆಮಿಗಳು ಕಬಡ್ಡಿ ತರಬೇತಿ, ಟೂರ್ನಿಗಳನ್ನು ಆಯೋಜಿಸುತ್ತಿವೆ. ಈ ಕ್ರೀಡೆಯ ಅಭಿವೃದ್ಧಿಯ ದಿಸೆಯಲ್ಲಿ ಉರ್ವದ ಕ್ರೀಡಾಸಂಕೀರ್ಣ ಮೈಲಿಗಲ್ಲು ಆಗಲಿದೆ. ಬಹುಮಡಿ ಕಟ್ಟಡದಲ್ಲಿ ಕಬಡ್ಡಿಗೆ ಮೂರು ಮತ್ತು ಬ್ಯಾಡ್ಮಿಂಟನ್‌ಗೆ ಆರು ಕೋರ್ಟ್‌ಗಳು ಇವೆ. ಹವಾನಿಯಂತ್ರಿತ ಪ್ರೇಕ್ಷಕರ ಗ್ಯಾಲರಿ, ಬಟ್ಟೆ ಬದಲಾಯಿಸುವ ಕೊಠಡಿ, ಊಟದ ಹಾಲ್ ಇತ್ಯಾದಿ ಇದೆ.
‘ಬೇಸ್‌ಮೆಂಟ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇದೆ, ಅಲ್ಲಿಂದ ಮೂರು ಲಿಫ್ಟ್ ಮತ್ತು ನಾಲ್ಕು ಸ್ಟೇರ್ ಕೇಸ್ ಇದೆ. ನೆಲಮಹಡಿಯಲ್ಲಿ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕೋರ್ಟ್‌ಗಳು ಇದ್ದು ಬೇಕಾದಂತೆ ಅಗತ್ಯಕ್ಕೆ ತಕ್ಕಂತೆ ಬದಲಾಯಿಸುವ ಸೌಲಭ್ಯ ಇದೆ. ಎರಡನೇ ಮಹಡಿ ಐದು ಬ್ಯಾಡ್ಮಿಂಟನ್ ಕೋರ್ಟ್‌ಗಳಿರುವ ಪ್ಲೇಯಿಂಗ್ ಏರಿಯಾವನ್ನು ಹೊಂದಿದೆ. ಇಲ್ಲೂ ಹವಾನಿಯಂತ್ರಿತ ಪ್ರೇಕ್ಷಕರ ಗ್ಯಾಲರಿ ಇದೆ. ನಾಲ್ಕನೇ ಮಹಡಿಯಲ್ಲಿ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಸಂಸ್ಥೆಯ ಕಚೇರಿ, ಜಿಮ್ ಇತ್ಯಾದಿ ಇದೆ’ ಎಂದು ಸ್ಮಾರ್ಟ್ ಸಿಟಿ ಎಂಜಿನಿಯರ್ ಚಂದ್ರಕಾಂತ್ ತಿಳಿಸಿದರು.
ಮೈದಾನದ ನೋಟ ಬದಲಾಗಲಿದೆ
ಆಸ್ಟ್ರೊ ಟರ್ಫ್ ಹಾಸಿದ ನಂತರ ನೆಹರು ಮೈದಾನದ ಪರಿಸ್ಥಿತಿಯೇ ಬದಲಾಗಲಿದೆ. ಹೆಚ್ಚು ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಗಾಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನನಗೆ ಟರ್ಫ್ ಇರುವ ಮೈದಾನದಲ್ಲಿ ಆಡಿ ನೆಹರು ಮೈದಾನದಲ್ಲಿ ಆಡುವಾಗ ತುಂಬ ಕಷ್ಟ ಆಗುತ್ತಿತ್ತು. ಇನ್ನು ಮುಂದೆ ಇಲ್ಲಿಯೂ ಖುಷಿಯಿಂದ ಆಡಬಹುದು.ಮುಹಮ್ಮದ್ ಅಸ್ಲಾಂ, ಫುಟ್‌ಬಾಲ್ ಆಟಗಾರ, ಯೆನೆಪೋಯ ಕಾಲೇಜು ಎಂಬಿಎ ವಿದ್ಯಾರ್ಥಿ
ನಿರ್ವಹಣೆ ಮುಖ್ಯ
ಟರ್ಫ್ ಅಂಗಣದಲ್ಲೂ ಗಾಯಗಳಾಗುವ ಸಾಧ್ಯತೆ ಇದೆ. ಮೊಣಕಾಲಿಗೆ ಹೆಚ್ಚು ಪೆಟ್ಟು ಬೀಳುವುದು ಇಂಥ ಅಂಗಣದಲ್ಲೇ. ಆದ್ದರಿಂದ ಸರಿಯಾದ ನಿರ್ವಹಣೆ ಬಹಳ ಮುಖ್ಯ. ಟರ್ಫ್ ಹಾಸಿದ ನಂತರ ಆಟಗಾರರ ಉತ್ಸಾಹ ಹೆಚ್ಚಲಿದೆ. ಅಭ್ಯಾಸ ಮಾಡಲು ಹೆಚ್ಚು ಅನುಕೂಲ ಆಗಲಿದೆ. ಇದು ಮಂಗಳೂರಿನ ಫುಟ್‌ಬಾಲ್‌ಗೆ ಸಂಬಂಧಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಮಣ್ಣಿನ ಅಂಗಣದಲ್ಲಿ ಆಡುತ್ತಿದ್ದ ಜಾಗದಲ್ಲಿ ಟರ್ಫ್‌ಗೆ ಇಳಿಯಲು ಉತ್ಸುಕನಾಗಿದ್ದೇನೆ.ಸಚಿನ್ ಸುನಿಲ್, ಫುಟ್‌ಬಾಲ್ ಆಟಗಾರ, ಕ್ರೀಡಾ ಅಧ್ಯಯನ ವಿದ್ಯಾರ್ಥಿ
ಎಲ್ಲ ಟೂರ್ನಿಗಳಿಗೆ ಸಜ್ಜಾಗಬಹುದು
ಟರ್ಫ್ ಹಾಸಬೇಕೆಂಬುದು ಬಹುಕಾಲದ ಕನಸಾಗಿತ್ತು. ಅದು ಈಗ ನನಸಾಗುತ್ತಿದೆ. ಮಣ್ಣಿನ ಅಂಗಣದಲ್ಲಿ ಆಡುವ ಹುಡುಗರು ಬೇರೆ ಜಿಲ್ಲೆಗಳಿಗೆ ಅಥವಾ ದೊಡ್ಡ ನಗರಗಳಿಗೆ ಹೋಗಿ ಪಂದ್ಯಗಳಲ್ಲಿ ಆಡುವುದು ಕಷ್ಟವಾಗುತ್ತಿತ್ತು. ಇನ್ನು ಮುಂದೆ ಟರ್ಫ್‌ನಲ್ಲೇ ಅಭ್ಯಾಸ ಮಾಡಿ ಟರ್ಫ್ ಅಂಗಣದಲ್ಲೇ ಆಡಬಹುದು. ದೊಡ್ಡ ಟೂರ್ನಿಗಳಿಗೆ ಸಜ್ಜಾಗಲು ಉತ್ತಮ ಅವಕಾಶ ಆಗಲಿದೆ.ಡಿ.ಎಂ. ಅಸ್ಲಾಂ, ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ
ಬ್ಯಾಡ್ಮಿಂಟನ್ ಟೂರ್ನಿಗಳ ಆಯೋಜನೆಗೆ ಮತ್ತು ಅಭ್ಯಾಸಕ್ಕೆ ಅತ್ಯುತ್ತಮ ಸೌಲಭ್ಯ ಮಂಗಳೂರಿನಲ್ಲಿ ಅತ್ಯವಶ್ಯಕವಾಗಿತ್ತು. ಇನ್ನು ಮುಂದೆ ವಸತಿ ಸಹಿತ ತರಬೇತಿ ಶಿಬಿರಗಳಿಗೆ ಅನುಕೂಲ ಆಗಲಿದೆ. ಕ್ರೀಡಾ ಸಂಕೀರ್ಣ ಸಮರ್ಪಕವಾಗಿ ಬಳಕೆ ಆಗಬೇಕು. ಕ್ರೀಡಾಪಟುಗಳಿಗೆ ಅನುಕೂಲ ಆಗುವಂತಿರಬೇಕೇ ಹೊರತು ರಾಜಕೀಯ ಮೇಲಾಟದ ಕೇಂದ್ರ ಆಗಬಾರದು. ಹಾಗೇನಾದರೂ ಆದರೆ ಕ್ರೀಡಾಪಟುಗಳ ಪರವಾಗಿ ಹೋರಾಟ ಮಾಡುವುದು ಅನಿವಾರ್ಯ ಆಗುತ್ತದೆ.ಗಣೇಶ್ ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ
ಮಂಗಳೂರಿನ ನೆಹರು ಮೈದಾನದ ಫುಟ್‌ಬಾಲ್ ಅಂಗಣದಲ್ಲಿ ಆಸ್ಟ್ರೊ ಟರ್ಫ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ
ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿರುವ ಬ್ಯಾಡ್ಮಿಂಟನ್ ಕ್ರೀಡಾಂಗಣ
ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿರುವ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಕ್ರೀಡಾ ಸಂಕೀರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.