ADVERTISEMENT

ಹೊಸ ನಿರೀಕ್ಷೆಯಲ್ಲಿ ಕೋಸ್ಟಲ್‌ವುಡ್‌

ಇದೇ 15 ರಿಂದ ಚಿತ್ರಮಂದಿರ ತೆರೆಯಲು ಸರ್ಕಾರದ ಅನುಮತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 16:53 IST
Last Updated 10 ಅಕ್ಟೋಬರ್ 2020, 16:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಅನ್‌ಲಾಕ್‌ ಮಾರ್ಗಸೂಚಿಯನ್ನು ಹೊರಡಿಸಿರುವ ಜಿಲ್ಲಾಡಳಿತ ಇದೇ 15 ರಿಂದ ಶೇ 50 ರಷ್ಟು ಸೀಟ್‌ಗಳೊಂದಿಗೆ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಈ ನಡುವೆ ಏಳು ತಿಂಗಳ ಬಳಿಕ ಕೋಸ್ಟಲ್‌ವುಡ್‌ನಲ್ಲೂ ಹೊಸ ನಿರೀಕ್ಷೆ ಆರಂಭವಾಗಿದೆ.

‘ಥಿಯೇಟರ್‌ನಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಒಂದು ಸೀಟಿನ ನಂತರದ ಸೀಟ್‌ ಅನ್ನು ಖಾಲಿ ಬಿಡಲಾಗುತ್ತದೆ. ಒಟ್ಟು ಥಿಯೇಟರ್‌ನಲ್ಲಿ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಅದೇ ರೀತಿ ಸಿನಿಮಾ ಟಿಕೆಟ್‌ ಬದಲು ಆನ್‌ಲೈನ್‌ ಟಿಕೆಟ್‌ ಅಥವಾ ಮೆಸೇಜ್‌ ತೋರಿಸುವ ಮೂಲಕ ಸಿನಿಮಾ ವೀಕ್ಷಣೆಗೆ ಒತ್ತು ನೀಡಲಾಗುವುದು. ಈ ಮೂಲಕ ಚಿತ್ರಮಂದಿರಗಳು ಪ್ರೇಕ್ಷಕರ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿವೆ’ ಎಂದು ಸಿನೆಪೊಲಿಸ್‌ ಪ್ರಮುಖ ಕೀರ್ತನ್‌ ಶೆಟ್ಟಿ ಹೇಳುತ್ತಾರೆ.

‘ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ತುಳುವಿನಲ್ಲಿ ಈಗಾಗಲೇ ಸಿದ್ಧವಾಗಿರುವ ಹಲವು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಹೊಸ ಸಿನಿಮಾಗಳ ಶೂಟಿಂಗ್‌ ಮತ್ತೆ ಮುಂದುವರಿಸುವ ಆಶಾಭಾವ ಮೂಡುತ್ತದೆ’ ಎಂದು ನಟ ಅರವಿಂದ ಬೋಳಾರ್‌ ಹೇಳುತ್ತಾರೆ.

ADVERTISEMENT

ಪ್ರದರ್ಶನಕ್ಕೆ ಸಿದ್ಧತೆ: ಮಂಗಳೂರಿನಲ್ಲಿ ಸಿಂಗಲ್‌ ಥಿಯೇಟರ್‌ಗಳಾದ ಜ್ಯೋತಿ, ರಮಾಕಾಂತಿ, ರೂಪವಾಣಿ, ಪ್ರಭಾತ್‌, ಸುಚಿತ್ರ, ಮಲ್ಟಿಪ್ಲೆಕ್ಸ್‌ನಲ್ಲಿ ಸಿಟಿಸೆಂಟರ್‌ನಲ್ಲಿ ಸಿನೆಪೊಲಿಸ್‌, ಭಾರತ್‌ ಮಾಲ್‌ನಲ್ಲಿ ಬಿಗ್‌ ಸಿನೆಮಾಸ್‌ ಹಾಗೂ ಫಾರಂ ಮಾಲ್‌ನಲ್ಲಿ ಪಿವಿಆರ್‌ ಥಿಯೇಟರ್‌ಗಳಿವೆ. ಸುರತ್ಕಲ್‌ನಲ್ಲಿ ಮೂರು ಥಿಯೇಟರ್‌ಗಳು ಹೊಸದಾಗಿ ಕಾರ್ಯಾರಂಭ ಮಾಡಲಿವೆ.

ಸಾಲು ಸಾಲು ಸಿನಿಮಾ

ಹಲವು ತುಳು ಸಿನಿಮಾಗಳು ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ, ಪ್ರದರ್ಶನಕ್ಕೆ ಸಿದ್ಧವಾಗಿವೆ. ‘ಕಾರ್ನಿಕದ ಕಲ್ಲುರ್ಟಿ’, ‘ಇಂಗ್ಲಿಷ್‌’, ‘ಇಲ್ಲೊಕ್ಕೆಲ್‌’, ‘ಪೆಪ್ಪೆರೆರೆ ಪೆರೆರೆರೆ’ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಈ ಪೈಕಿ ‘ಕಾರ್ನಿಕದ ಕಲ್ಲುರ್ಟಿ’, ‘ಇಂಗ್ಲಿಷ್‌’ ಸಿನಿಮಾಗಳು ಲಾಕ್‌ಡೌನ್‌ ಮುನ್ನವೇ ಪ್ರದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಲಾಕ್‌ಡೌನ್‌ ಕಾರಣದಿಂದ ಪ್ರದರ್ಶನ ಸ್ಥಗಿತಗೊಳಿಸಿತ್ತು.

‘ಪೆಪ್ಪೆರೆರೆ ಪೆರೆರೆರೆ’ ಚಿತ್ರ ಡಿಸೆಂಬರ್‌ನಲ್ಲಿ ಒಟಿಟಿ ಫ್ಲ್ಯಾಟ್‌ಫಾರಂನಲ್ಲಿ ರಿಲೀಸ್‌ಗೆ ಸಿದ್ಧವಾಗಿವೆ. ಒಂದು ವೇಳೆ ಚಲನಚಿತ್ರ ಮಂದಿರ ಆರಂಭ ಆಗುವುದಾದರೆ ಈ ಸಿನಿಮಾ ಥಿಯೇಟರ್‌ನಲ್ಲಿಯೂ ಬಿಡುಗಡೆ ಆಗಲಿದೆ. ‘ವಿಕ್ರಾಂತ್‌’, ‘ಲಾಸ್ಟ್‌ ಬೆಂಚ್‌’, ‘ಏರೆಗಾವುಯೆ ಕಿರಿಕಿರಿ’, ‘ಅಗೋಳಿ ಮಂಜಣ್ಣ’ ಮುಂತಾದ ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿವೆ. ‘ಮಗನೇ ಮಹಿಷ’, ‘ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್’, ‘ಟ್ಯಾಕ್ಸಿ ಬಾಬಣ್ಣ’, ‘ಗಬ್ಬರ್‌ಸಿಂಗ್‌’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಿವೆ.

---

ಚಿತ್ರ ಪ್ರದರ್ಶನದಿಂದ ಕಲಾವಿದರು, ತಂತ್ರಜ್ಞರಿಗೆ ಉಪಯೋಗವಾಗಲಿದೆ. ತುಳು ನಾಟಕಕ್ಕೆ ಕೂಡ ಇದೇ ರೀತಿ ಅವಕಾಶ ದೊರಕಿದರೆ, ಸಾವಿರಾರು ಕಲಾವಿದರಿಗೆ ಅನುಕೂಲವಾಗಲಿದೆ.
- ಅರವಿಂದ ಬೋಳಾರ್‌,ನಟ, ರಂಗಭೂಮಿ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.