ADVERTISEMENT

ಮಂಗಳೂರು: ಮರೆಯಾದ ಕೋಸ್ಟಲ್‌ವುಡ್‌ನ ‘ಜ್ಯೋತಿ’

ಕರಾವಳಿಯಲ್ಲಿ ತುಳು ಸಿನಿಮಾಕ್ಕೆ ಬೆಳ್ಳಿಪರದೆಯ ಕೊರತೆ

ಪ್ರದೀಶ್ ಎಚ್.ಮರೋಡಿ
Published 28 ಡಿಸೆಂಬರ್ 2021, 2:37 IST
Last Updated 28 ಡಿಸೆಂಬರ್ 2021, 2:37 IST
ಬಾಗಿಲು ಮುಚ್ಚಿರುವ ಮಂಗಳೂರಿನ ಜ್ಯೋತಿ ಚಿತ್ರಮಂದಿರ
ಬಾಗಿಲು ಮುಚ್ಚಿರುವ ಮಂಗಳೂರಿನ ಜ್ಯೋತಿ ಚಿತ್ರಮಂದಿರ   

ಮಂಗಳೂರು: ‘ತುಳು ಸಿನಿಮಾ’ ಎಂದ ತಕ್ಷಣ ನೆನಪಾಗುವುದು ಮಂಗಳೂರಿನ ಹೃದಯಭಾಗದಲ್ಲಿದ್ದ ‘ಜ್ಯೋತಿ’ ಚಿತ್ರಮಂದಿರ. ಎಲ್ಲರ ಅಚ್ಚುಮೆಚ್ಚಿನ ಈ ಥಿಯೇಟರ್‌ ಕೋವಿಡ್‌ ಲಾಕ್‌ಡೌನ್‌ ಬಳಿಕ ನೆನಪಿನಂಗಳಕ್ಕೆ ಜಾರಿದೆ. ಬಹುತೇಕ ತುಳು ಸಿನಿಮಾಗಳ ಸೋಲು– ಗೆಲುವಿನಲ್ಲಿ ಪಾಲು ಪಡೆದ ಈ ಒಂಟಿ ಪರದೆ ಮರೆಯಾಗಿರುವುದು ತುಳು ಚಿತ್ರರಂಗಕ್ಕೆ ದೊಡ್ಡ ಹೊಡೆತ.

50 ವರ್ಷಗಳ ಕಾಲ ನಾನಾ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸಿದ್ದ ‘ಜ್ಯೋತಿ’, ನಗರದ ಪ್ರಮುಖ ವೃತ್ತವೊಂದರ ಹೆಸರಾಗಿದೆ. (ಈಗ ಡಾ. ಅಂಬೇಡ್ಕರ್‌ ವೃತ್ತ) ಚಿತ್ರಮಂದಿರದ ಮುಂದಿನ ವೃತ್ತವನ್ನೇ ಜನರು ‘ಜ್ಯೋತಿ’ ವೃತ್ತ ಎನ್ನುತ್ತಿದ್ದರು. ಹೀಗೆ ಕೋಸ್ಟಲ್‌ವುಡ್‌ ಸಿನಿಮಾಗಳ ಹೆಬ್ಬಾಗಿಲಾಗಿದ್ದ ‘ಜ್ಯೋತಿ’ಯ ಬಾಗಿಲು ಈಗಮುಚ್ಚಿದೆ.

ಕೋಸ್ಟಲ್‌ವುಡ್‌ನ 120 ಚಿತ್ರಗಳಲ್ಲಿ ಶೇ 80ರಷ್ಟು ಚಿತ್ರಗಳು ಈ ಚಿತ್ರಮಂದಿರದ ‌ಬೆಳ್ಳಿಪರದೆ ಏರಿವೆ. ಆದರೆ, 2020ರ ಮಾರ್ಚ್‌ ತಿಂಗಳಿಂದ ಇಲ್ಲಿ ಯಾವುದೇ ಸಿನಿಮಾ ಪ್ರದರ್ಶನ ಕಂಡಿಲ್ಲ. ಬೇರೆ ಬೇರೆ ಚಿತ್ರಮಂದಿರಗಳಲ್ಲಿ ತುಳು ಸಿನಿಮಾಗಳು ಬಿಡುಗಡೆಯಾದರೂ ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪಲು ಸಾಧ್ಯವಾಗಿಲ್ಲ.

ADVERTISEMENT

ಮರೆಯಾದ ಚಿತ್ರಮಂದಿರಗಳು: ದಶಕದ ಹಿಂದೆ ಕರಾವಳಿಯಲ್ಲಿ 30ಕ್ಕೂ ಅಧಿಕ ಒಂಟಿ ಪರದೆಯ ಚಿತ್ರಮಂದಿರಗಳು ತುಳು ಸಿನಿಮಾಕ್ಕೆ ಸಿಗುತ್ತಿದ್ದವು. ಪ್ರಸ್ತುತ 10ರಿಂದ 12 ಚಿತ್ರಮಂದಿರಗಳು ಮಾತ್ರ ಸಿಗುತ್ತಿವೆ. ಒಂಟಿ ಪರದೆಯ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಮಲ್ಟಿಫ್ಲೆಕ್ಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮಲ್ಟಿಫ್ಲೆಕ್ಸ್‌ ಸಂಸ್ಕೃತಿಗೆ ತುಳು ಸಿನಿಮಾ ಪ್ರೇಕ್ಷಕರು ಇನ್ನೂ ಪೂರ್ತಿಯಾಗಿ ಒಗ್ಗಿಕೊಳ್ಳದ ಕಾರಣ ತುಳು ಚಿತ್ರಗಳ ನಿರ್ಮಾಪಕರು ಅತಂತ್ರವಾಗಿದ್ದಾರೆ.

ಮಂಗಳೂರು ನಗರದಲ್ಲಿರುವ ರಮಾಕಾಂತಿ ಮತ್ತು ರೂಪವಾಣಿ ಟಾಕೀಸ್‌ಗಳು ತುಳು ಸಿನಿಮಾಗಳಿಗೆ ಸಿಗುತ್ತದೆಯಾದರೂ ಅಲ್ಲಿಗೆ ಬರಲು ಪ್ರೇಕ್ಷಕರು ಹಿಂದೇಟು ಹಾಕುತ್ತಾರೆ. ಆದರೆ, ತುಳು ಸಿನಿಮಾಗಳನ್ನು ಅಲ್ಲಿಯೇ ಬಿಡುಗಡೆ ಮಾಡದೆ ಅನ್ಯ ದಾರಿಯಿಲ್ಲ. ಹವಾನಿಯಂತ್ರಿತವಾಗಿ ನವೀಕರಣಗೊಂಡ ನಗರದ ಸುಚಿತ್ರ ಮತ್ತು ಪ್ರಭಾತ್‌ ಚಿತ್ರಮಂದಿರಗಳು ಹಲವು ತುಳು ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗಿದ್ದವು. ಆದರೆ, ಈ ಚಿತ್ರಮಂದಿರಗಳು ಪ್ರಸ್ತುತ ತುಳು ಚಿತ್ರಗಳಿಂದ ಅಂತರ ಕಾಯ್ದುಕೊಂಡಿವೆ.

ಒಂಟಿ ಪರದೆಯಿರುವ ಸುರತ್ಕಲ್‌, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಿ.ಸಿ.ರೋಡ್‌, ಮೂಡುಬಿದಿರೆ, ಕಾರ್ಕಳ, ಉಡುಪಿ, ಕಾಸರಗೋಡು ಟಾಕೀಸ್‌ಗಳಲ್ಲಿ ಮಾತ್ರ ತುಳು ಚಿತ್ರಗಳಿಗೆ ಅವಕಾಶವಿದೆ. ಬಹುಪರದೆಯನ್ನು ಹೊಂದಿರುವ ಮಂಗಳೂರಿನ ಬಿಗ್‌ ಸಿನಿಮಾಸ್‌, ಪಿವಿಆರ್‌, ಸಿನೆಪೊಲಿಸ್‌, ಮಣಿಪಾಲದ ಐನಾಕ್ಸ್‌, ಕುಂದಾಪುರ ಮತ್ತು ಮಣಿಪಾಲದ ಬಿಗ್ ಸಿನಿಮಾಸ್‌ನಲ್ಲಿ ತುಳು ಚಿತ್ರಕ್ಕೆ ಜಾಗವಿದೆ.

‘ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಒಂಟಿ ಪರದೆಯ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿರುವುದು ತುಳುಚಿತ್ರರಂಗಕ್ಕೆ ದೊಡ್ಡ ಹೊಡೆತ. ತುಳು ಚಿತ್ರದ ಪ್ರೇಕ್ಷಕರು ಬಡವರು ಅಥವಾ ಮಧ್ಯಮ ವರ್ಗದವರು. ಮಲ್ಟಿಫ್ಲೆಕ್ಸ್‌ ಸಂಸ್ಕೃತಿಗೆ ಹೊಂದಿಕೊಳ್ಳಲು ಅವರಿಗೆ ಇನ್ನೂ ಕಾಲಾವಕಾಶ ಬೇಕು. ಉಳಿದಿರುವ ಕೆಲವು ಚಿತ್ರಮಂದಿರಗಳನ್ನಾದರೂ ಉಳಿಸಲು ಪ್ರಯತ್ನ ನಡೆಯಬೇಕು’ ಎಂದು ಹೇಳುತ್ತಾರೆ ನಿರ್ದೇಶಕ ದೇವದಾಸ್‌ ಕಾಪಿಕಾಡ್‌. ‘ಹೊಸ ಚಿತ್ರಮಂದಿರಗಳು ನಿರ್ಮಾಣವಾಗುವುದು ಕನಸಿನ ಮಾತು. ಇನ್ನು ಏನಿದ್ದರೂ ಮಲ್ಟಿಫೆಕ್ಸ್‌ ಯುಗ. ಈ ಸಂಸ್ಕೃತಿ ದೊಡ್ಡ ನಗರದಿಂದ ಇದೀಗ ನಿಧಾನವಾಗಿ ತಾಲ್ಲೂಕುಗಳಿಗೆ ವ್ಯಾಪಿಸುತ್ತಿದೆ. ತುಳು ಪ್ರೇಕ್ಷಕರನ್ನು ಈ ಸಂಸ್ಕೃತಿಗೆ ಒಗ್ಗಿಸುವ ಕೆಲಸ ನಡೆದರೆ ಮಾತ್ರ ತುಳು ಚಿತ್ರರಂಗಕ್ಕೆ ಭವಿಷ್ಯ ಇರುತ್ತದೆ. ಬಂಟ್ವಾಳ, ಪುತ್ತೂರು, ಸುರತ್ಕಲ್‌ ಸೇರಿದಂತೆ ಹಲವೆಡೆ ಮಲ್ಟಿಫ್ಲೆಕ್ಸ್‌ಗಳು ತಲೆಯೆತ್ತುತ್ತಿರುವುದು ಆಶಾದಾಯಕ ಬೆಳವಣಿಗೆ’ ಎನ್ನುತ್ತಾರೆ ನಿರ್ದೇಶಕ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌.

ನೆನಪಿನಂಗಳಕ್ಕೆ ಜಾರಿದ ಚಿತ್ರಮಂದಿರಗಳು

ಕೆಲ ತುಳು ಚಿತ್ರಗಳ ಬಿಡುಗಡೆಗೆ ವೇದಿಕೆಯಾಗಿದ್ದ ಮಂಗಳೂರಿನ ಸೆಂಟ್ರಲ್‌ ಚಿತ್ರಮಂದಿರ ಬಾಗಿಲುಮುಚ್ಚಿ ಹಲವು ವರ್ಷಗಳೇ ಕಳೆದಿದೆ. ಅಲ್ಲದೆ, ನಗರದಲ್ಲಿದ್ದ ಅಮೃತ್‌, ಪ್ಲಾಟಿನಂ, ನ್ಯೂಚಿತ್ರ ಟಾಕೀಸ್‌ಗಳೂ ಮರೆಯಾಗಿವೆ.

ಕಡಬದ ಜಾನ್ಸನ್‌, ಉಪ್ಪಿನಂಗಡಿಯ ಪ್ರೀತಂ, ಪುತ್ತೂರಿನ ನವರಂಗ್‌, ಸಂಗೀತಾ, ಮಯೂರ, ಬೆಳ್ಳಾರೆಯ ಜುಪೀಟರ್‌, ಸುಳ್ಯದ ಪ್ರಕಾಶ್‌, ವಿಟ್ಲದ ಕವಿತಾ ಟಾಕೀಸ್‌ಗಳು ಮುಚ್ಚಿವೆ. ಅಲ್ಲದೆ, ಉಜಿರೆಯ ಸಂಧ್ಯಾ, ಬಂಟ್ವಾಳದ ವಿನಾಯಕ, ವಿಜಯಲಕ್ಷ್ಮಿ, ಕಲ್ಲಡ್ಕದ ಮಾರುತಿ, ಮೂಡುಬಿದಿರೆಯ ವಿಜಯ, ಕೈಕಂಬದ ಮಂಜುನಾಥ, ಕಾರ್ಕಳದ ಸನ್ಮಾನ, ಕಿನ್ನಿಗೋಳಿಯ ಅಶೋಕ, ಮೂಲ್ಕಿಯ ಭವಾನಿಶಂಕರ್‌, ಸುರತ್ಕಲ್‌ನ ನವರಂಗ್‌, ಪಡುಬಿದ್ರಿಯ ಗುರುದೇವ, ಕಾಪುವಿನ ವೆಂಕಟೇಶ್‌, ಬ್ರಹ್ಮಾವರದ ಜಯಭಾರತ್, ಸಾಸ್ತಾನದ ನಂದಾ, ತೊಕ್ಕೊಟ್ಟುನಲ್ಲಿ ಶ್ರೀಕೃಷ್ಣ, ಉಳ್ಳಾಲದ ಶಾಂತಿ, ಉಡುಪಿಯ ಗೀತಾಂಜಲಿ, ಕುಂದಾಪುರದ ಪೂರ್ಣಿಮಾ ಹೀಗೆ 20ಕ್ಕೂ ಅಧಿಕ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ.

***

ಜ್ಯೋತಿ ಚಿತ್ರಮಂದಿರ ತುಳು ಸಿನಿಮಾಗಳಿಗೆ ಹೆಬ್ಬಾಗಿಲು ಆಗಿತ್ತು. ಅದು ಮುಚ್ಚಿರುವುದರಿಂದ ತುಳು ಸಿನಿಮಾ ರಂಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

- ರಾಮ್‌ ಶೆಟ್ಟಿ, ‘ಏರೆಗಾವುಯೆ ಕಿರಿಕಿರಿ’ ಚಿತ್ರದ ನಿರ್ದೇಶಕ

(ಪ್ರತಿಕ್ರಿಯಿಸಿ–9513322936, editormng@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.