ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ವಾಕಿಟಾಕಿಯಿಂದ ಪ್ರಯಾಣಿಕರಿಗೆ ಆಗಾಗ ಕೇಳಿಸುತ್ತಿದ್ದ ಧ್ವನಿ ಈಗ ಸ್ತಬ್ಧಗೊಂಡಿದೆ. ಇಂಥ ಸಿಬ್ಬಂದಿಗೆ ನೀಡಲಾಗುವ ಸಲಹೆ– ಸೂಚನೆಗಳು, ಅವರು ತಮ್ಮೊಳಗೆ ನಡೆಸುವ ಸಂವಾದ ಇನ್ನುಮುಂದೆ ಸಂಬಂಧಪಟ್ಟ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಕೇಳಿಸುವುದಿಲ್ಲ. ಭದ್ರತಾ ಸಿಬ್ಬಂದಿಯ ಸಂವಹನ ವ್ಯವಸ್ಥೆಯಲ್ಲಿ ಅಂಥ ಬದಲಾವಣೆ ಮಾಡಲಾಗಿದೆ. ಸಿಬ್ಬಂದಿಗೆ ಅತ್ಯಾಧುನಿಕ ಸಂವಹನ ಉಪಕರಣಗಳನ್ನು ನೀಡಲಾಗಿದೆ.
ವಾಕಿಟಾಕಿ ಜೊತೆ ಸಂಪರ್ಕ ಸಾಧಿಸಿದ ಉಪಕರಣವನ್ನು ಆಯಾ ಸಿಬ್ಬಂದಿಯ ಕಿವಿಗೆ ಅಳವಡಿಸಲಾಗಿದ್ದು, ಅವರು ನಡೆಸುವ ಮಾತುಕತೆ ಇಬ್ಬರನ್ನು ಬಿಟ್ಟು ಬೇರೆ ಯಾರಿಗೂ ಕೇಳಿಸದಂತಾಗಿದೆ. ಇದರಿಂದ ಭದ್ರತಾ ಸಿಬ್ಬಂದಿಗೆ ಸದಾ ಕಾಲ ಕೈಯಲ್ಲಿ ವಾಕಿಟಾಕಿ ಹಿಡಿದುಕೊಂಡೇ ಇರಬೇಕಾದಂತ ಪರಿಸ್ಥಿತಿ ತಪ್ಪಿದ್ದು, ಸುರ್ತು ಸಂದರ್ಭದಲ್ಲಿ ಆಯುಧಗಳನ್ನು ಬಳಸಲು ಅನುಕೂಲವಾದಂತಾಗಿದೆ.
‘ಹೊಸ ಸಂವಹನ ಕಿಟ್ ಬಳಕೆಯಿಂದಾಗಿ, ಯಾರಿಗೆ ವಿಚಾರವನ್ನು ತಿಳಿಸಬೇಕೊ ಅವರಿಗೆ ಮಾತ್ರ ತಿಳಿಸಲು ಸಿಬ್ಬಂದಿಗೆ ಸಾಧ್ಯವಾಗುವಂತಾಗಿದೆ. ವಿಮಾನ ನಿಲ್ದಾಣದಲ್ಲಿ ಬೇರೆಬೇರೆ ವಿಭಾಗಗಳಿವೆ. ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕಾದ ಅಗತ್ಯವಿಲ್ಲ. ಹೊಸ ವ್ಯವಸ್ಥೆಯಿಂದಾಗಿ ಭದ್ರತಾ ಸಿಬ್ಬಂದಿಯ ಕೈಗಳನ್ನು ಮುಕ್ತಗೊಳಿಸಿ ಯಾವ ಸಂದರ್ಭದಲ್ಲೂ ಸನ್ನದ್ಧ ಸ್ಥಿತಿಯಲ್ಲಿರುವಂತೆ ಮಾಡಲಾಗಿದೆ.25 ಸಿಬ್ಬಂದಿಗೆ ಈ ಹೊಸ ಕಿಟ್‌ಗಳನ್ನು ನೀಡಲಾಗಿದೆ’ ಎಂದು ವಿಮಾನ ನಿಲ್ದಾಣ ಭದ್ರತಾ ಮುಖ್ಯಸ್ಥ ವೀರೇಂದ್ರ ಮೋಹನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.