ADVERTISEMENT

ಜಿಲ್ಲೆಗೆ ಬೇಕಿದೆ ಇನ್ನಷ್ಟು ಹಾಸ್ಟೆಲ್

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಕಾಯುತ್ತಿರುವ 2,000ಕ್ಕೂ ಅಧಿಕ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:03 IST
Last Updated 24 ಜನವರಿ 2026, 7:03 IST

ಮಂಗಳೂರು: ವಿದ್ಯಾನಗರಿ ಮಂಗಳೂರಿಗೆ ಉನ್ನತ ಶಿಕ್ಷಣಕ್ಕಾಗಿ ಹೊರಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳು ಅಧಿಕ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಾಗಿ ಸರ್ಕಾರಿ ವಿದ್ಯಾರ್ಥಿ ನಿಲಯಗಳನ್ನು ಅವಲಂಬಿಸುವುದರಿಂದ ಜಿಲ್ಲೆಯಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆಯಲು ಪೈಪೋಟಿ ಹೆಚ್ಚು.

ಅದರಲ್ಲೂ ಮಂಗಳೂರಿನಲ್ಲಿರುವ ಹಾಸ್ಟೆಲ್‌ಗಳಲ್ಲಿ ಸೀಟ್ ಪಡೆದುಕೊಳ್ಳಲು ತೀವ್ರ ಪೈಪೋಟಿ ಇರುತ್ತದೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ (ಬಿಸಿಎಂ) ಒಟ್ಟು 80 ಹಾಸ್ಟೆಲ್‌ಗಳು ಇದ್ದು, 59 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಾಗಿವೆ. ಸಮಾಜ ಕಲ್ಯಾಣ ಇಲಾಖೆಯಡಿ 30 ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್‌ಗಳು ಇದ್ದು, ಅವುಗಳಲ್ಲಿ 11 ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಾಗಿವೆ.

ಇಷ್ಟು ಸಂಖ್ಯೆಯಲ್ಲಿ ಹಾಸ್ಟೆಲ್‌ಗಳು ಇದ್ದರೂ, 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ, ಜಿಲ್ಲೆಗೆ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಸರ್ಕಾರ ಬಜೆಟ್‌ನಲ್ಲಿ ಘೋಷಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. 

ADVERTISEMENT

ಬಿಸಿಎಂ ಇಲಾಖೆಯಡಿ ಜಿಲ್ಲೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಒಟ್ಟು 3,400ರಷ್ಟು ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಬೇಡಿಕೆ ಇನ್ನೂ ಅಧಿಕ ಇದ್ದು, ವಸತಿ ನಿಲಯಕ್ಕೆ ಪ್ರವೇಶ ಬಯಸಿರುವ 1,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಮಂಗಳೂರು ನಗರದಲ್ಲಿರುವ ಹಾಸ್ಟೆಲ್‌ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೂ ತೀವ್ರ ಬೇಡಿಕೆ ಇದೆ. 100 ವಿದ್ಯಾರ್ಥಿಗಳ ಸಾಮರ್ಥ್ಯದ ತಲಾ ಒಂದು ಬಾಲಕ ವಿದ್ಯಾರ್ಥಿ ನಿಲಯ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯದ ಪ್ರಸ್ತಾವವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದರು. 

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ 13 ಹಾಸ್ಟೆಲ್‌ಗಳು ಇವೆ. 2024–25ನೇ ಸಾಲಿನಲ್ಲಿ ಆರು ಹಾಸ್ಟೆಲ್‌ಗಳು ಮಂಜೂರು ಆಗಿವೆ. ಶೇ 75ರಷ್ಟು ಅಲ್ಪಸಂಖ್ಯಾತ ಹಾಗೂ ಶೇ 25ರಷ್ಟು ಇತರ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮಂಗಳೂರು ನಗರ ಹಾಗೂ ಮೂಡುಬಿದಿರೆಯಲ್ಲಿ ಹಾಸ್ಟೆಲ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಪ್ರಸ್ತುತ ಇರುವ ಸೀಟ್‌ಗಳು ಭರ್ತಿಯಾಗಿದ್ದು, ಈ ವರ್ಷ 500ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

ಮಂಗಳೂರು ನಗರಕ್ಕೆ ಐದು ಬಾಲಕರ ವಸತಿ ನಿಲಯ ಹಾಗೂ ಐದು ಬಾಲಕಿಯರ ವಸತಿ ನಿಲಯಕ್ಕೆ ಬೇಡಿಕೆ ಇದೆ. ಈ ವಿಷಯವನ್ನು ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.