ADVERTISEMENT

ತಡೆಗೋಡೆ ಉರುಳಿ ಬೈಕ್‌ಗಳಿಗೆ ಹಾನಿ

ಜಿಲ್ಲೆಯಾದ್ಯಂತ ತಗ್ಗಿದ ಮಳೆ ಅಬ್ಬರ: 12 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 15:08 IST
Last Updated 17 ಜುಲೈ 2021, 15:08 IST
ಮಂಗಳೂರಿನ ಬಂದರಿನ ನಲಪಾಡ್ ಕುನಿಲ್ ಟಾವರ್ಸ್‌ಗೆ ಹೊಂದಿಕೊಂಡಿರುವ ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದು 13ಕ್ಕೂ ಹೆಚ್ಚು ವಾಹನ ಜಖಂಗೊಂಡಿವೆ.
ಮಂಗಳೂರಿನ ಬಂದರಿನ ನಲಪಾಡ್ ಕುನಿಲ್ ಟಾವರ್ಸ್‌ಗೆ ಹೊಂದಿಕೊಂಡಿರುವ ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದು 13ಕ್ಕೂ ಹೆಚ್ಚು ವಾಹನ ಜಖಂಗೊಂಡಿವೆ.   

ಮಂಗಳೂರು: ಜಿಲ್ಲೆಯಾದ್ಯಂತ ಶನಿವಾರ ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ಮಳೆಯಾಗಿದ್ದು, ಮಧ್ಯಾಹ್ನ ಸ್ವಲ್ಪ ಹೊತ್ತು ಮಳೆ ಬಿಡುವು ಪಡೆದಿತ್ತು. ಗುರುವಾರ ಮತ್ತು ಶುಕ್ರವಾರ ಸುರಿದ ಸತತ ಮಳೆಯಿಂದಾಗಿ ಶನಿವಾರ ಮತ್ತಷ್ಟು ಹಾನಿ ಸಂಭವಿಸಿದೆ.

ಶನಿವಾರ ಮತ್ತೆ ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿದ್ದು, ಗುಡ್ಡ ಜರಿದಿವೆ. ಅಡಿಕೆ ಮರಗಳಿಗೆ ಹಾನಿಯಾಗಿದೆ. 10 ಮನೆಗಳಿಗೆ ಭಾಗಶಃ ಮತ್ತು 2 ಮನೆಗಳು ಸಂಪೂರ್ಣ ಸೇರಿದಂತೆ 12 ಮನೆಗಳಿಗೆ ಹಾನಿಯಾಗಿವೆ. ಮೂಡುಬಿದಿರೆ ತಾಲ್ಲೂಕಿನ 4, ಮಂಗಳೂರು ತಾಲ್ಲೂಕಿನ 2, ಬಂಟ್ವಾಳದ 3, ಬೆಳ್ತಂಗಡಿ, ಕಡಬ, ಮೂಲ್ಕಿ ತಾಲ್ಲೂಕಿನ ತಲಾ ಒಂದು ಮನೆಗಳಿಗೆ ಹಾನಿಯಾಗಿವೆ. ಏಪ್ರಿಲ್ 1ರಿಂದ ಈವರೆಗೆ 420 ಮನೆಗಳಿಗೆ ಭಾಗಶಃ ಮತ್ತು 75 ಮನೆಗಳು ಸಂಪೂರ್ಣ ಹಾನಿಯಾಗಿದೆ.

ಶನಿವಾರ ಮಂಗಳೂರು ತಾಲ್ಲೂಕಿನ ಕೊಂಪದವು ಗ್ರಾಮದ ಸರೋಜಿನಿಯವರ ಅಡಿಕೆ ತೋಟಕ್ಕೆ ಅಪಾರ ಹಾನಿಯಾಗಿದೆ. ಬಜ್ಪೆ ಕೊರಗ ಕಾಲೊನಿಯ ಮನೆಗೆ ಭಾಗಶಃ ಹಾನಿಯಾಗಿದೆ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ADVERTISEMENT

ತಪ್ಪಿದ ದುರಂತ:

ಬಂದರಿನ ನಲಪಾಡ್ ಕುನಿಲ್ ಟಾವರ್ಸ್‌ಗೆ ಹೊಂದಿಕೊಂಡಿರುವ ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದು 13ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಅಪಾರ್ಟ್‌ಮೆಂಟ್‌ನಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಮಕ್ಕಳು ಕಟ್ಟಡದ ಆವರಣದಲ್ಲಿ ಆಟ ಆಡುತ್ತಿದ್ದರು. ಶನಿವಾರ ಸಂಜೆ ವೇಳೆ ಮಳೆ ಬರುತ್ತಿದ್ದರಿಂದ ಮಕ್ಕಳು ಹೊರಬಂದಿಲ್ಲ. ಈ ಸಮಯದಲ್ಲಿ ತಡೆಗೋಡೆ ಕುಸಿದಿದ್ದು, ಭಾರಿ ದುರಂತ ತಪ್ಪಿದೆ.

ನಿರಂತರವಾಗಿ ಮಳೆ ಸುರಿಯುತ್ತಿದ್ದು, ಎಪಿಎಂಸಿ ಯಾರ್ಡ್‌ನ ತಡೆಗೋಡೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಇದರಿಂದ ಸಂಜೆ 4.30ರ ಸುಮಾರಿಗೆ ತಡೆಗೋಡೆ ಕುಸಿದಿದೆ. ತಡೆಗೋಡೆಯ ಮಣ್ಣು, ಕಲ್ಲುಗಳು, ನಲಪಾಡ್ ಟಾವರ್ಸ್‌ನ ಕಾಂಪೌಂಡ್‌ನಲ್ಲಿ ಬಿದ್ದಿತ್ತು.

13ಕ್ಕೂ ಹೆಚ್ಚು ವಾಹನಗಳು ತಡೆಗೋಡೆಯ ಅವಶೇಷಗಳ ಅಡಿಯಲ್ಲಿ ಹೂತು ಹೋಗಿವೆ. ಕಟ್ಟಡದ ಆವರಣದಲ್ಲಿದ್ದ ನೀರಿನ ಬಾವಿಯಲ್ಲಿ ಅರ್ಧದಷ್ಟು ಮಣ್ಣು, ಕಲ್ಲು ತುಂಬಿದೆ. ಬಾವಿಯ ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ಸುಮಾರು ಒಂದೂವರೆ ಅಡಿ ಅಗಲ, 25 ಅಡಿ ಎತ್ತರ ಹಾಗೂ 100 ಅಡಿಗೂ ಹೆಚ್ಚು ಉದ್ದದ ತಡೆಗೋಡೆ ಬಿದ್ದಿದೆ.

ಎಪಿಎಂಸಿ ಯಾರ್ಡ್‌ನಲ್ಲಿ ತಡೆಗೋಡೆಗೆ ಅಂಟಿಕೊಂಡು ಸ್ಮಾರ್ಟ್‌ಸಿಟಿ ಕಾಮಗಾರಿಯ ಅವಶೇಷ ತಂದು ಸುರಿಯಲಾಗುತ್ತಿದೆ. ಇದರಿಂದಾಗಿಯೇ ಗೋಡೆ ಕುಸಿದಿದೆ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿಗಳು ದೂರಿದ್ದಾರೆ.

ದೂರು ನೀಡಿದರೂ ಪ್ರಯೋಜನವಾಗಿಲ್ಲ:

‘ಸ್ಮಾರ್ಟ್‌ಸಿಟಿ ಕಾಮಗಾರಿಯ ಜಲ್ಲಿ, ಮರಳು ಸೇರಿದಂತೆ ಅವಶೇಷಗಳನ್ನು ತಡೆಗೋಡೆಯ ಪಕ್ಕ ಸುರಿಯಲಾಗುತ್ತಿದೆ. ಅದರ ಒತ್ತಡಕ್ಕೆ ಗೋಡೆ ಕುಸಿದಿದೆ. ಬಾವಿಯಲ್ಲೂ ಕಲ್ಲು ಬಿದ್ದಿವೆ. ಬಹುತೇಕ ತಡೆಗೋಡೆ ಬಿದ್ದಿದ್ದು, ಇನ್ನುಳಿದ ಗೋಡೆಯ ಭಾಗವೂ ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ. ಇನ್ನುಳಿದ ಆ ಗೋಡೆಯೂ ಬಿದ್ದಲ್ಲಿ ಅಪಾರ್ಟ್‌ಮೆಂಟ್‌ಗೆ ಅಪಾಯವಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಬೇಕು’ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿ ಅಬ್ದುಲ್ ಖಾದರ್ ಒತ್ತಾಯಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.