ADVERTISEMENT

ಅಲ್ಪಾವಧಿ ಕೃಷಿ ಸಾಲಕ್ಕೆ ಷರತ್ತು: ರೈತರಲ್ಲಿ ಆತಂಕ

ಶೂನ್ಯ ಬಡ್ಡಿದರದ ಸಾಲ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:17 IST
Last Updated 18 ಜೂನ್ 2021, 5:17 IST
ಕೃಷಿ ಚಟುವಟಿಕೆ ಆರಂಭಿಸಿರುವ ರೈತರು (ಸಾಂದರ್ಭಿಕ ಚಿತ್ರ)
ಕೃಷಿ ಚಟುವಟಿಕೆ ಆರಂಭಿಸಿರುವ ರೈತರು (ಸಾಂದರ್ಭಿಕ ಚಿತ್ರ)   

ಮಂಗಳೂರು: ರೈತರು ಪಡೆಯುವ ಶೂನ್ಯ ಬಡ್ಡಿದರದ ₹ 3 ಲಕ್ಷ ವರೆಗಿನ ಅಲ್ಪಾವಧಿ ಕೃಷಿ ಸಾಲಕ್ಕೆ ಸರ್ಕಾರ ಹೊಸ ಷರತ್ತು ವಿಧಿಸಿದೆ. ಕೋವಿಡ್ ಲಾಕ್‌ಡೌನ್, ಹವಾಮಾನ ವೈಪರೀತ್ಯ ಹೀಗೆ ವಿವಿಧ ಕಾರಣಗಳಿಂದ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈತರು ಇದರಿಂದ ಆತಂಕ್ಕೆ ಒಳಗಾಗಿದ್ದಾರೆ.

ಈ ಷರತ್ತಿನಂತೆ ರಾಜ್ಯದಲ್ಲಿ ಬಹಳಷ್ಟು ರೈತರು ಶೂನ್ಯ ಬಡ್ಡಿದರದ ಸಾಲದಿಂದ ವಂಚಿತರಾಗಲಿದ್ದಾರೆ. ಅಲ್ಪಾವಧಿ ಕೃಷಿ ಸಾಲ ಯೋಜನೆಯಲ್ಲಿ ಒಂದು ಕುಟುಂಬವು ಗರಿಷ್ಠ ₹ 3 ಲಕ್ಷ ವರೆಗೆ ಸಾಲ ಪಡೆಯಬಹುದು. ಹೊಸ ನಿಯಮದಂತೆ ಮಾಸಿಕ ವೇತನ ಅಥವಾ ತಿಂಗಳಿಗೆ ₹ 20ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವ ರೈತರು ಅಥವಾ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ ರೈತರಿಗೆ ಶೂನ್ಯ ಬಡ್ಡಿ ಸಾಲ ದೊರೆಯುವುದಿಲ್ಲ. ಏಪ್ರಿಲ್ ನಂತರ ಕೃಷಿ ಸಾಲಗಳ ಮರುಪಾವತಿಯ ವೇಳೆ ಹೊಸ ಷರತ್ತು ವಿಧಿಸಿರುವುದು ರೈತರ ಗಮನಕ್ಕೆ ಬಂದಿದೆ. ಹಲವರು ವಿಧಿಯಿಲ್ಲದೆ, ಬಡ್ಡಿ ತುಂಬಿ, ಸಾಲ ಮರುಪಾವತಿಸಿದ್ದಾರೆ.

2004ರಿಂದ ಸರ್ಕಾರವು ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದ ಸಾಲ ನೀಡುತ್ತಿದೆ. ಈವರೆಗೆ ಹಿಡುವಳಿ ಹೊಂದಿರುವ ಎಲ್ಲ ಕೃಷಿಕರು ಈ ಸಾಲ ಪಡೆಯಲು ಅವಕಾಶವಿತ್ತು. ಈಗ ಸಹಕಾರ ಇಲಾಖೆ ವಿಧಿಸಿರುವ ಹೊಸ ಷರತ್ತಿನಲ್ಲಿ ಒಳಪಡುವವರು ಮಾತ್ರ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಉಳಿದವರು ಕೃಷಿ ಸಾಲಗಳಿಗೆ ಶೇ 7ರಷ್ಟು ಬಡ್ಡಿ ಪಾವತಿಸಬೇಕಾಗಿದೆ.

ADVERTISEMENT

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23,044 ರೈತರು ಶೂನ್ಯ ಬಡ್ಡಿದರದ ಸಾಲದಿಂದ ವಂಚಿತರಾಗುತ್ತಾರೆ. ಉಡುಪಿಯಲ್ಲಿ 8,216 ಮತ್ತು ದಕ್ಷಿಣ ಕನ್ನಡದಲ್ಲಿ 14,828 ಇಂತಹ ರೈತರು ಇದ್ದಾರೆ. ಶೂನ್ಯ ಬಡ್ಡಿದರದಿಂದ ಸಿಗುವ ₹ 354.91 ಕೋಟಿ ಸಾಲ ಕೈತಪ್ಪಿ ಹೋಗಲಿದೆ.

‘ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲಕ್ಕೆ ಷರತ್ತು ವಿಧಿಸದಂತೆ ಸಹಕಾರ ಸಚಿವ ಸೋಮಶೇಖರ ಅವರಿಗೆ ಮನವಿ ಮಾಡಲಾಗಿದೆ. ಈ ಷರತ್ತುಗಳನ್ನು ಹಿಂಪಡೆಯುವಂತೆ ವಿನಂತಿಸಲಾಗಿದೆ’ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.