ADVERTISEMENT

ಮಂಗಳೂರು: ಕಾಂಗ್ರೆಸ್‌ ಬಸ್‌ ಯಾತ್ರೆ 22 ರಂದು ಮಂಗಳೂರಿಗೆ

ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸಹಿತ ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 5:10 IST
Last Updated 3 ಜನವರಿ 2023, 5:10 IST
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಮುಖರು ಭಾಗವಹಿಸಿದರು
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಮುಖರು ಭಾಗವಹಿಸಿದರು   

ಮಂಗಳೂರು: ಮುಂಬವರು ವಿಧಾನಸಭಾ ಚುನಾವಣೆ ಪ್ರಚಾರದ ಸಲುವಾಗಿ ಕಾಂಗ್ರೆಸ್‌ ಪಕ್ಷವು ರಾಜ್ಯದಾದ್ಯಂತ ಕೈಗೊಂಡಿರುವ ಬಸ್‌ ಯಾತ್ರೆಯು ಇದೇ 22ರಂದು ಮಂಗಳೂರಿಗೆ ಬರಲಿದೆ. ಅಂದು ಮಧ್ಯಾಹ್ನ ನಗರದಲ್ಲಿ ಭಾರಿ ರ‍್ಯಾಲಿ ಹಮ್ಮಿಕೊಳ್ಳಲು ಪಕ್ಷದ ಜಿಲ್ಲಾ ಸಮಿತಿಯು ಸಿದ್ಧತೆ ನಡೆಸಿದೆ.

ಈ ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಲು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯು ಸೋಮವಾರ ಇಲ್ಲಿ ನಡೆಯಿತು.

‘ನಗರದಲ್ಲಿ ನಡೆಯಲಿರುವ ಬಸ್ ಯಾತ್ರೆಯಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ ಸಲೀಂ ಅಹಮ್ಮದ್‌, ಎಐಸಿಸಿ ಪ್ರಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹಾಗೂ ಮೈಸೂರು ವಿಭಾಗದ ಉಸ್ತುವಾರಿಯಾಗಿರುವ ಕೇರಳದ ಶಾಸಕ ರೋಜಿ ಜಾನ್‌ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ’ ಎಂದು ಹರೀಶ್‌ ಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಬಸ್‌ ಯಾತ್ರೆಯ ಪ್ರಯುಕ್ತ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾರಿ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ. ಈ ಸಮಾವೇಶದಲ್ಲಿ 25 ಸಾವಿರಕ್ಕೂ ಅಧಿಕ ಜನರನ್ನು ಸೇರಿಸುವ ಉದ್ದೇಶವಿದೆ. ಈ ಸಮಾವೇಶವನ್ನು ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ’ ಎಂದರು.

‘ಕೆಪಿಸಿಸಿ ವತಿಯಿಂದ ಇದೇ 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ನಾ ನಾಯಕಿ’ ಸಮಾವೇಶ, ಚಿತ್ರದುರ್ಗದಲ್ಲಿ ಇದೇ 8ರಂದು ಏರ್ಪಡಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶಗಳಿಗೆ ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರಗಳಿಂದ ಕಾರ್ಯಕರ್ತರನ್ನು ಕರೆದೊಯ್ಯುವ ಬಗ್ಗೆಯೂ ಚರ್ಚೆ ನಡೆಸಿದ್ದೇವೆ’ ಎಂದು ಅವರು ತಿಳಿಸಿದರು.

ವಿಧಾನ ಸಭೆಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಬಯಸಿರುವ 35 ಕ್ಕೂ ಅಧಿಕ ಆಕಾಂಕ್ಷಿಗಳೂ ಸಭೆಯಲ್ಲಿ ಭಾಗವಹಿಸಿದ್ದರು. ನಗರದಲ್ಲಿ ನಡೆಯುವ ರ‍್ಯಾಲಿಯನ್ನು ಯಶಸ್ಸುಗೊಳಿಸುವುದಕ್ಕೆ ಅವರಿಗೂ ವಿಶೇಷ ಹೊಣೆಗಾರಿಕೆ ವಹಿಸಲಾಗಿದೆ ಎಂದು ಗೊತ್ತಾಗಿದೆ.

ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಮೊಹಿಯುದ್ದೀನ್‌ ಬಾವ, ಐವನ್ ಡಿಸೋಜ, ಇಬ್ರಾಹೀಂ ಕೋಡಿಜಾಲ್, ಸದಾಶಿವ್ ಉಳ್ಳಾಲ್, ಜೋಕಿಂ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಮಮತಾ ಗಟ್ಟಿ, ಕೃಪಾ ಆಳ್ವ, ಧನಂಜಯ ಅಡ್ಪಂಗಾಯ, ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೊ, ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ನಾರಾಯಣ್ ನಾಯ್ಕ್, ಸುಭಾಷ್ ಕೊಳ್ನಾಡು, ಲಾರೆನ್ಸ್ ಡಿಸೋಜ, ಬಿ.ಎಂ.ಅಬ್ಬಾಸ್ ಅಲಿ, ಡಾ.ಶೇಖರ್ ಪೂಜಾರಿ, ಬ್ಲಾಕ್ ಅಧ್ಯಕ್ಷರುಗಳು, ಕೆಪಿಸಿಸಿ ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.