ADVERTISEMENT

ಬಿಜೆಪಿಯ ಕೋಮುವಾದ ದೇಶಕ್ಕೆ ಮಾರಕ: ಶಾಸಕ ಅಶೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:00 IST
Last Updated 24 ಏಪ್ರಿಲ್ 2024, 4:00 IST
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿದರು
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿದರು   

ಪುತ್ತೂರು: ‘ದೇಶದಲ್ಲಿ ಜಾತಿ–ಧರ್ಮಗಳ ನಡುವೆ ಒಡಕು ಮೂಡಿಸುವ ಬಿಜೆಪಿಯ ಹಿಂದುತ್ವ ದೇಶಕ್ಕೆ ಮಾರಕವಾಗಲಿದೆ. ನಮ್ಮ ನಡುವಿನ ಒಡಕುಗಳ ಕಾರಣದಿಂದ ಇತರ ದೇಶಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡುವ ಸಂದರ್ಭದ ಅಪಾಯವಿದ್ದು, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಅಗತ್ಯವಿದೆ’ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವುದೇ ನಿಜವಾದ ಹಿಂದುತ್ವ. ಆದರೆ, ಬಿಜೆಪಿಗರದ್ದು ನಕಲಿ ಹಿಂದುತ್ವ. ರಾಜಕೀಯ ಲಾಭಕ್ಕಾಗಿ ಅವರು ಹಿಂದುತ್ವವನ್ನು ಬಳಕೆ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ನಮ್ಮ ಪಕ್ಷದ ಸಾಧನೆಯನ್ನು, ಸತ್ಯ ವಿಚಾರಗಳನ್ನು ಪ್ರತಿ ಮನೆಯವರಿಗೆ ತಿಳಿಸಿ. ಯಾವ ಪಕ್ಷದವರನ್ನೂ ದೂರುವ ಮೂಲಕ ಮತಯಾಚಿಸುವುದು ಬೇಡ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ಮಾತನಾಡಿ, ಬಿಜೆಪಿ ಕೇವಲ ಕೋಮುವಾದವನ್ನೇ ಬಂಡವಾಳವನ್ನಾಗಿ ಅಧಿಕಾರ ಪಡೆಯಲು ಯತ್ನಿಸುತ್ತಿದ್ದು, ಇದನ್ನು ತಡೆದು ಸಾಮರಸ್ಯದ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ವಿ. ಮಾತನಾಡಿದರು.

ಪಕ್ಷದ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಚಂದ್ರಹಾಸ ಶೆಟ್ಟಿ, ಶಾರದಾ ಅರಸ್, ಎಚ್.ಮಹಮ್ಮದ್ ಅಲಿ, ಪ್ರಸಾದ್ ಕೌಶಲ್ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಶಕೂರ್, ನಿರ್ಮಲ್ ಕುಮಾರ್ ಜೈನ್, ಶೀನಪ್ಪ ಗೌಡ ಬೈತ್ತಡ್ಕ, ನೂರುದ್ದೀನ್ ಸಾಲ್ಮರ ಭಾಗವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಸ್ವಾಗತಿಸಿದರು. ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.