ADVERTISEMENT

ಜನರಿಗೆ ನೀಡುವ ಕಷ್ಟ ಅಭಿವೃದ್ಧಿಯೇ?: ಕಾಂಗ್ರೆಸ್‌ ಪ್ರಶ್ನೆ

ಇಂಧನ ಬೆಲೆ ಏರಿಕೆ ವಿರೋಧಿಸಿ ಜಿಲ್ಲೆಯ ವಿವಿಧೆಡೆಗಳಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 3:43 IST
Last Updated 8 ಜುಲೈ 2021, 3:43 IST
ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ಉದ್ಘಾಟಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ಉದ್ಘಾಟಿಸಿದರು.   

ಪುತ್ತೂರು: ‘ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾದ ಸಂದರ್ಭದಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಂಜೀವ ಮಠಂದೂರು ಈಗ ಎಲ್ಲಿ ಹೋಗಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ಪ್ರಶ್ನಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಂಧನ ಬೆಲೆ ಏರಿಕೆ ವಿರೋಧಿಸಿ ಬುಧವಾರ ಆಯೋಜಿಸಿದ್ದ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ‘ಅಭಿವೃದ್ಧಿ ಕೆಲಸಕ್ಕಾಗಿ ದರ ಏರಿಕೆ ಮಾಡಿರುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ಪೆದ್ದುತನದ ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ಕಷ್ಟಕ್ಕೆ ಒಡ್ಡಿ ಇವರು ಮಾಡುವ ಅಭಿವೃದ್ಧಿಯಾದರೂ ಏನು ಎಂಬುದನ್ನು ಬಹಿರಂಗಪಡಿಸಲಿ’ ಎಂದು ಆಗ್ರಹಿಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ‘ಹಿಂದಿನ ಸರ್ಕಾರದ ಸಾಲ ತೀರಿಸಲು ಇಂಧನ ಬೆಲೆ ಏರಿಕೆ ಮಾಡಲಾಗಿದೆ ಎನ್ನುವ ಕೇಂದ್ರ ಸರ್ಕಾರವು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಏಕೆ ಮಾರಾಟ ಮಾಡಿದೆ ಎಂಬುದನ್ನು ಜನತೆಗೆ ತಿಳಿಸಬೇಕು’ ಎಂದರು.

ADVERTISEMENT

ದರ್ಬೆಯಲ್ಲಿ ನಡೆದ ಸಮಾರೋಪದಲ್ಲಿ ಮಾತನಾಡಿದ ಯುವಕ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಲಪ್ಪಾಡ್ ಅವರು, ‘ದರ ಇಳಿಕೆಯಾಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

ಸೈಕಲ್ ಜಾಥಾವು ನಗರದ ಹೊರವಲಯದ ನೆಹರೂನಗರದಿಂದ ಆರಂಭಗೊಂಡು ಪುತ್ತೂರು ಮುಖ್ಯರಸ್ತೆಯಲ್ಲಿ ಸಂಚರಿಸಿ ದರ್ಬೆಯಲ್ಲಿ ಕೊನೆಗೊಂಡಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಪ್ರಮುಖರಾದ ಮಹಮ್ಮದ್ ಬಡಗನ್ನೂರು, ಡಾ. ರಾಜಾರಾಂ, ಜೋಕಿಂ ಡಿಸೋಜ, ವಿಶಾಲಾಕ್ಷಿ ಬನ್ನೂರು, ಮಹಮ್ಮದ್ ಆಲಿ, ಯು.ಟಿ. ತೌಸೀಫ್ ಇದ್ದರು.

ಅಭಯಚಂದ್ರರ ಸೈಕಲ್ ಜಾಥಾ

ಮೂಡುಬಿದಿರೆ: ಅಡುಗೆ ಅನಿಲ ಮತ್ತು ತೈಲಬೆಲೆ ಏರಿಕೆ ವಿರೋಧಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಒಂಟಿಯಾಗಿ ಬುಧವಾರ ಸೈಕಲ್ ಜಾಥಾ ನಡೆಸಿದರು.

ಬೆಳಿಗ್ಗೆ ಇಲ್ಲಿನ ಮುಖ್ಯ ರಸ್ತೆಯಲ್ಲಿ ತಹಶೀಲ್ದಾರ್ ಕಚೇರಿವರೆಗೆ ಸೈಕಲ್‌ನಲ್ಲಿ ತೆರಳಿ ಮನವಿ ಸಲ್ಲಿಸಿದರು. ‘ಸೈಕಲ್ ಜಾಥಾ ನಡೆಸಲು ಅನುಮತಿ ನೀಡುವಂತೆ ಮಂಗಳವಾರ ಮೂಡುಬಿದಿರೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೆ. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದಲ್ಲದೆ ಸೈಕಲ್ ಜಾಥಾ ನಡೆಸಿದರೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಎಚ್ಚರಿಸಿದ್ದಾರೆ. ಅದಕ್ಕಾಗಿ ನಾನು ಒಬ್ಬನೇ ಸೈಕಲ್ ಜಾಥಾ ನಡೆಸಬೇಕಾಯಿತು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಯದಲ್ಲಿ ಸೈಕಲ್ ಜಾಥಾ

ಸುಳ್ಯ: ಇಂಧನ ಬೆಲೆ ಏರಿಕೆ ವಿರೋಧಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬುಧವಾರ ಸೈಕಲ್ ಜಾಥಾ ನಡೆಯಿತು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಡಿಸಿಸಿ ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್ ಮಾತನಾಡಿದರು.

ಕಾಂಗ್ರೆಸ್ ಸ್ಥಳೀಯ ಪ್ರಮುಖರಾದ ಜಿ.ಕೃಷ್ಣಪ್ಪ, ಡಾ.ಬಿ.ರಘು, ಎಸ್.ಸಂಶುದ್ದೀನ್, ತಾಜ್ ಮಹಮ್ಮದ್ ಸಂಪಾಜೆ, ಜಿ.ಕೆ.ಹಮೀದ್, ಶಾಫಿ ಕುತ್ತಮೊಟ್ಟೆ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಸುರೇಶ್ ಅಮೈ, ಆನಂದ ಬೆಳ್ಳಾರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.