ADVERTISEMENT

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಎನ್‌ಐಎಗೆ ಅಧಿಕೃತ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 6:07 IST
Last Updated 2 ಡಿಸೆಂಬರ್ 2022, 6:07 IST

ಮಂಗಳೂರು: ನಗರದ ಗರೋಡಿಯಲ್ಲಿ ನ.19ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಅಧಿಕೃತವಾಗಿ ಕೈಗೆತ್ತಿಕೊಂಡಿದೆ.

ಮಂಗಳೂರಿಗೆ ಬಂದಿರುವ ಎನ್‌ಐಎ ಅಧಿಕಾರಿಗಳು, ನಗರದ ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮೊಹಮ್ಮದ್ ಶಾರಿಕ್ ವಿಚಾರಣೆ ಆರಂಭಿಸಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆರೋಪಿಯು ಚೇತರಿಸಿಕೊಳ್ಳುತ್ತಿದ್ದು, ಆತ ಗುಣಮುಖನಾದ ಮೇಲೆ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಂಬ್ ಸ್ಫೋಟ ಘಟನೆ ನಡೆದ ಬೆನ್ನಲ್ಲೇ ಎಸಿಪಿ ಪಿ.ಎ. ಹೆಗಡೆ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಶಾರೀಕ್ ವಿಚಾರಣೆ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಈವರೆಗೆ ನಡೆಸಿರುವ ವಿಚಾರಣಾ ವರದಿಯನ್ನು ಮಂಗಳೂರು ನಗರ ಪೊಲೀಸರು ಎನ್‌ಐಎಗೆ ಹಸ್ತಾಂತರಿಸಲಿದ್ದಾರೆ ಎನ್ನಲಾಗಿದೆ.

ADVERTISEMENT

‘ಇನ್ನು ಮುಂದಿನ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ಕೈಗೆತ್ತಿಕೊಳ್ಳುವುದರಿಂದ ನಮ್ಮ ಆಯ್ದ ಅಧಿಕಾರಿಗಳು, ಸಿಬ್ಬಂದಿ ಅವರ ಜತೆ ಇರಲಿದ್ದಾರೆ. ಶಾರಿಕ್‌ಗೆ ಶೇ 40ರಷ್ಟು ಸುಟ್ಟ ಗಾಯಗಳಾಗಿರುವುದರಿಂದ ಆತನ ಆರೋಗ್ಯದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಶಾರಿಕ್‌ಗೆ ಕೇರಳದ ನಂಟು ಹಾಗೂ ಡ್ರಗ್ಸ್ ಜಾಲದ ಸಂಪರ್ಕ ಇದೆಯೇ ಎಂಬ ಕುರಿತು ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ. ಎನ್‌ಐಎ ಕೊಚ್ಚಿ ಹಾಗೂ ತಮಿಳುನಾಡು ಘಟಕದ ಅಧಿಕಾರಿಗಳು ಈ ಸಂಬಂಧ ಕೇರಳದಲ್ಲಿ ತನಿಖೆ ಆರಂಭಿಸಿದ್ದಾರೆ. ಕೇರಳದಲ್ಲಿ ಸಕ್ರಿಯವಾಗಿರುವ ಡ್ರಗ್ಸ್ ಜಾಲವೊಂದು, ಈ ದಂಧೆಯಿಂದ ಬರುವ ನಿರ್ದಿಷ್ಟ ಆದಾಯವನ್ನು ವಿಧ್ವಂಸಕ ಕೃತ್ಯಗಳಿಗೆ ಬಳಕೆ ಮಾಡುತ್ತಿತ್ತು ಎಂಬ ಬಗ್ಗೆ ಕೂಡ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.