ಮೂಡುಬಿದಿರೆ: ಮಳೆಗಾಲದಲ್ಲಿ ಉಂಟಾಗುವ ಹಾನಿಯನ್ನು ತಡೆಗಟ್ಟಲು ಇಲಾಖಾಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸಿ ಅನಾಹುತ ಉಂಟಾದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಎಚ್ಚರಿಸಿದರು.
ಪ್ರಾಕೃತಿಕ ವಿಕೋಪ ತಡೆಗಟ್ಟುವ ಸಂಬಂಧ ಮಂಗಳವಾರ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಶಾಲೆ, ಸಾರ್ವಜನಿಕರು ಓಡಾಡುವ ಸ್ಥಳ, ರಸ್ತೆ ಬದಿಯಲ್ಲಿ ಅಪಾಯಕಾರಿ ಮರ, ಕೊಂಬೆಗಳಿದ್ದರೆ ತೆರವುಗೊಳಿಸಬೇಕು. ವಾಲಿದ ವಿದ್ಯುತ್ ಕಂಬಗಳು, ಜೋತುಬಿದ್ದ ತಂತಿಗಳಿದ್ದರೆ ಸರಿಪಡಿಸಬೇಕು. ಚರಂಡಿ, ರಾಜಕಾಲುವೆ, ತೋಡುಗಳ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ವಹಿಸಬೇಕು ಎಂದರು.
ಮೆಸ್ಕಾಂ ಮತ್ತು ಅರಣ್ಯ ಇಲಾಖೆಗಳಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ನಿರ್ಲಕ್ಷ್ಯ ಸಲ್ಲದು ಎಂದರು.
‘ಇಲಾಖೆಯ ಕೆಲಸಗಳನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಮಾಡಿ. ಜನರ ಜೀವ, ಆಸ್ತಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ನಿಮ್ಮ ಕೆಲಸಗಳಿಗೆ ಇನ್ನೊಂದು ಇಲಾಖೆಯಿಂದ ಅಥವಾ ಮೇಲಧಿಕಾರಿಗಳಿಂದ ಸಹಕಾರ ಸಿಗದಿದ್ದರೆ ನೇರವಾಗಿ ನನಗೆ ತಿಳಿಸಿ. ಅವರ ಜತೆ ನಾನು ಮಾತನಾಡುತ್ತೇನೆ’ ಎಂದರು.
ಇಲಾಖೆಗಳ ಪ್ರಗತಿ ಪರಿಶೀಲಿಸಲು ಎರಡು ವಾರದ ನಂತರ ಇನ್ನೊಂದು ಸಭೆ ಕರೆಯಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶ್ರೀಧರ್ ಎಸ್.ಮುಂದಲಮನಿ ಮಾತನಾಡಿ, ಮಳೆಗಾಲಕ್ಕೆ ಮುನ್ನ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಸೂಚನೆ ನೀಡಿದರೂ ಕೆಲವು ಅಧಿಕಾರಿಗಳು ಸ್ಪಂದಿಸಿಲ್ಲ. ಪ್ರಾಕೃತಿಕ ವಿಕೋಪದ ಸಂದರ್ಭ ಜೀವ ಹಾನಿ ಅಥವಾ, ಅನಾಹುತ ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಅಗತ್ಯ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.