ADVERTISEMENT

ಒಂದೇ ದಿನ ಕೋವಿಡ್‌ಗೆ ಮೂರು ಸಾವು: ಯುವಕನ‌ ಮೃತದೇಹದ‌ ಅಂತ್ಯಕ್ರಿಯೆಗೆ ವಿರೋಧ

ಮಂಗಳೂರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 11:30 IST
Last Updated 28 ಜೂನ್ 2020, 11:30 IST
   

ಮಂಗಳೂರು: ಜಿಲ್ಲೆಯಲ್ಲಿ ಭಾನುವಾರ ಕೋವಿಡ್‌ನಿಂದ ಮೂವರು ಮೃತಪಟ್ಟಿದ್ದಾರೆ. ಬೆಳಿಗ್ಗೆ ಇಬ್ಬರು ಮೃತಪಟ್ಟಿದ್ದು, ಮಧ್ಯಾಹ್ನ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾರೆ.

ಸುರತ್ಕಲ್ ಗ್ರಾಮದ ಜೋಕಟ್ಟೆ ನಿವಾಸಿ 51 ವರ್ಷದ ಮಹಿಳೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕ್ಷಯರೋಗದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ 26ರಂದು ಸೋಂಕು ಪತ್ತೆಯಾಗಿತ್ತು.

ಭಾನುವಾರ ಬೆಳಿಗ್ಗೆ ಬಂಟ್ವಾಳದ 57 ವರ್ಷದ ಮಹಿಳೆ ಹಾಗೂ ಸುರತ್ಕಲ್‌ನ ಇಡ್ಯಾ ನಿವಾಸಿ 31 ವರ್ಷದ ಯುವಕ ಕೋವಿಡ್ ಸೋಂಕಿನಿಂದ‌ ಮೃತಪಟ್ಟಿದ್ದರು.

ADVERTISEMENT

ಅಂತ್ಯಕ್ರಿಯೆಗೆ ವಿರೋಧ

ಯುವಕನ ಮೃತದೇಹದ ಅಂತ್ಯಕ್ರಿಯೆಗೆ ಸ್ಥಳೀಯರು ವಿರೋಧ‌ ವ್ಯಕ್ತಪಡಿಸಿದ ಘಟನೆ ನಗರದ ಬೋಳಾರನಲ್ಲಿ ನಡೆದಿದೆ.

ಇಡ್ಯಾ ಗ್ರಾಮದ ಈ ಯುವಕ ಕೋವಿಡ್‌ನಿಂದ ಮೃತಪಟ್ಟಿದ್ದು, ಭಾನುವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಇಡ್ಯಾ‌ ಗ್ರಾಮದ ಮಸೀದಿಯ ದಫನ್ ಭೂಮಿಯಲ್ಲಿ‌ ನೀರು ಹರಿದು ಬರುತ್ತಿದ್ದರಿಂದ, ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು.

ಮೃತದೇಹವನ್ನು ಹೊತ್ತ ಆಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಬೋಳಾರ ಮಸೀದಿಗೆ ಬಂದಾಗ, ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಇಡ್ಯಾ ಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿ, ಮೃತದೇಹವನ್ನು ತೆಗೆದುಕೊಂಡು ಹೋಗಲಾಯಿತು.

ಉಪ ವಿಭಾಗಾಧಿಕಾರಿ ಮದನ್ ಮೋಹನ್ ಮಧ್ಯಪ್ರವೇಶಿಸಿ, ಸ್ಥಳೀಯರ ಮನವೊಲಿಸಿದ್ದು, ಬೋಳಾರ ಮಸೀದಿ ಆವರಣದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.