ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

ಕಾರ್ಪೊರೇಷನ್ ಬ್ಯಾಂಕ್‌ ಜಾಗೃತ ಸಪ್ತಾಹದಲ್ಲಿ ಪಿ.ವಿ. ಭಾರತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 15:51 IST
Last Updated 30 ಅಕ್ಟೋಬರ್ 2019, 15:51 IST
ಮಂಗಳೂರಿನ ಕಾರ್ಪೊರೇಷನ್‌ ಬ್ಯಾಂಕಿನ ಪ್ರಧಾನ ಕಚೇರಿ ಎದುರು ಬುಧವಾರ ಮಾನವ ಸರಪಳಿ ರಚಿಸಲಾಯಿತು.
ಮಂಗಳೂರಿನ ಕಾರ್ಪೊರೇಷನ್‌ ಬ್ಯಾಂಕಿನ ಪ್ರಧಾನ ಕಚೇರಿ ಎದುರು ಬುಧವಾರ ಮಾನವ ಸರಪಳಿ ರಚಿಸಲಾಯಿತು.   

ಮಂಗಳೂರು: ಕೇಂದ್ರ ಜಾಗೃತ ಆಯೋಗದ ನಿರ್ದೇಶನದಂತೆ ಕಾರ್ಪೊರೇಷನ್ ಬ್ಯಾಂಕ್ ವತಿಯಿಂದ ಇದೇ 28 ರಿಂದ ನವೆಂಬರ್ 2 ರವರೆಗೆ ಜಾಗೃತ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ವರ್ಷ ‘ಪ್ರಾಮಾಣಿಕತೆ ಒಂದು ಜೀವನ ಶೈಲಿ’, ‘ಸಾರ್ವಜನಿಕ ಜೀವನದಲ್ಲಿ ಸಂಭವನೀಯತೆ ಮತ್ತು ಸಮಗ್ರತೆಯ ಮಹತ್ವ’ ಘೋಷವಾಕ್ಯದೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ.

ಬುಧವಾರ ಬ್ಯಾಂಕಿನ ಪ್ರಧಾನ ಕಚೇರಿಯ ಎದುರು ‘ಪ್ರಾಮಾಣಿಕತೆ ಒಂದು ಜೀವನ ಶೈಲಿ’ ವಿಷಯವನ್ನು ನಿರೂಪಿಸುವ ಮಾನವ ಸರಪಳಿ ರಚಿಸಲಾಯಿತು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಪಿ.ವಿ. ಭಾರತಿ ಮತ್ತು ಬ್ಯಾಂಕಿನ ಮುಖ್ಯ ಜಾಗೃತ ಅಧಿಕಾರಿ ಎ.ಬಿ. ವಿಜಯಕುಮಾರ್ ಅವರು ಮಾನವ ಸರಪಳಿಯನ್ನು ಮುನ್ನಡೆಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮಹಾಪ್ರಬಂಧಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯ ನಿರ್ವಾಹಕರು ಸೇರಿದಂತೆ ಸುಮಾರು 150 ಕ್ಕೂ ಅಧಿಕ ಜನರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.

ADVERTISEMENT

ಬ್ಯಾಂಕಿನ ಸಿಬ್ಬಂದಿ ಮಾನವ ಸರಪಳಿ ರಚನೆಯಾದ ಕೂಡಲೇ, ಫೋರಂ ಫಿಜಾ ಶಾಪಿಂಗ್ ಮಾಲ್‌ನಲ್ಲಿ ಫ್ಲ್ಯಾಶ್ ಮಾಬ್ ಅನ್ನು ನಡೆಸಲಾಯಿತು. ಮಾಲ್‌ನಲ್ಲಿ ‘ಭ್ರಷ್ಟಾಚಾರಕ್ಕೆ ಧಿಕ್ಕಾರ’ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಿ ವಿ ಭಾರತಿ, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರ ವಹಿಸಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಎಟಿಎಂ ಪಿನ್ ಸಂಖ್ಯೆಯನ್ನು ಬಹಿರಂಗಪಡಿಸದಂತೆ ತಿಳಿಸಿದ ಅವರು, ನಿಯಮಿತವಾಗಿ ಪಿನ್‌ ಸಂಖ್ಯೆಯನ್ನು ಬದಲಾಯಿಸುವಂತೆ ಸಲಹೆ ನೀಡಿದರು. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಭ್ರಷ್ಟಾಚಾರ ವಿರೋಧಿ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವಂತೆ ಮನವಿ ಮಾಡಿದರು.

ಜಾಗೃತ ಸಪ್ತಾಹದ ಅಂಗವಾಗಿ ಬ್ಯಾಂಕ್, ದೇಶದಾದ್ಯಂತ ಉದ್ಯೋಗಿಗಳಿಗೆ ಪ್ರಬಂಧ, ಕೇಸ್ ಸ್ಟಡಿ, ರಸಪ್ರಶ್ನೆ ಸ್ಪರ್ಧೆಗಳಂತಹ ವಿವಿಧ ಸ್ಪರ್ಧೆಗಳನ್ನು ನಡೆಸುತ್ತಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಂಕ್ ಸ್ಪರ್ಧೆಗಳನ್ನು ಆಯೋಜಿಸಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.