ADVERTISEMENT

ಭ್ರಷ್ಟಾಚಾರದ ದೂರುಗಳಿದ್ದರೆ ಸಲ್ಲಿಸಿ: ಎಸ್ಪಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 14:12 IST
Last Updated 26 ಸೆಪ್ಟೆಂಬರ್ 2022, 14:12 IST

ಮಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ ಸಾರ್ವಜನಿಕರು ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸುವಂತೆ ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ತಿಳಿಸಿದರು.

ಈಚೆಗೆ ಅಧಿಕಾರ ಸ್ವೀಕರಿಸಿರುವ ಅವರು, ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅಥವಾ ಗಳಿಕೆಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದರೆ ಅವರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ರಾಜ್ಯ ಸರ್ಕಾರ ಕರ್ನಾಟಕ ಲೋಕಾಯುಕ್ತವನ್ನು ಬಲಿಷ್ಠಗೊಳಿಸುವ, ಪೊಲೀಸ್ ಠಾಣೆ ಅಧಿಕಾರದ ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಕೆಲಸ ಮಾಡಲು ಅಧಿಕಾರ ನೀಡಿದೆ’ ಎಂದರು.

ಎಸಿಬಿಯಲ್ಲಿರುವ ಹಳೆಯ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವರ್ಗಾವಣೆಯಾದ ಬಳಿಕ ಇರುವ ಪ್ರಕರಣಗಳ ವಿರುದ್ಧ ತನಿಖೆ ಕೈಗೆತ್ತಿಕೊಳ್ಳಲಾಗುತ್ತದೆ. ಮಂಗಳೂರು ವಿಭಾಗದಲ್ಲಿ ಎರಡು ಡಿವೈಎಸ್ಪಿ ಹಾಗೂ ಒಂದು ಇನ್‌ಸ್ಪೆಕ್ಟರ್ ಹುದ್ದೆ ಇದ್ದು, ಒಂದು ಇನ್‌ಸ್ಪೆಕ್ಟರ್‌ ಹಾಗೂ ಆರು ಕಾನ್‌ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಉಡುಪಿಯಲ್ಲಿ ಇರುವ ತಲಾ ಒಂದು ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ ಹುದ್ದೆಗಳಲ್ಲಿ, ಇನ್‌ಸ್ಪೆಕ್ಟರ್ ಹುದ್ದೆ ಖಾಲಿ ಇದೆ. ಖಾಲಿ ಇರುವ ಹುದ್ದೆ ಶೀಘ್ರ ಭರ್ತಿಯಾಗಲಿದೆ ಎಂದು ಹೇಳಿದರು.

ADVERTISEMENT

ಪೊಲೀಸ್ ಠಾಣೆ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಲೋಕಾಯುಕ್ತವು, ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ. ಎಸಿಬಿಗಿಂತ ಮೊದಲು ಲೋಕಾಯುಕ್ತ ಅಧಿಕಾರದಲ್ಲಿದ್ದಾಗ ಮಂಗಳೂರು ವಿಭಾಗದ 12 ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಶಿಕ್ಷೆ ವಿಧಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಉಡುಪಿ ಡಿವೈಎಸ್ಪಿ ಜಗದೀಶ್, ಮಂಗಳೂರು ಡಿವೈಎಸ್ಪಿ ಚಲುವರಾಜು, ಕಲಾವತಿ, ಉಡುಪಿ ಪೊಲೀಸ್ ಇನ್‌ಸ್ಪೆಕ್ಟರ್ ಜಯರಾಮ ಡಿ. ಗೌಡ, ಮಂಗಳೂರು ಪೊಲೀಸ್ ಇನ್‌ಸ್ಪೆಕ್ಟರ್ ಎನ್. ಅಮಾನುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.