ADVERTISEMENT

ಅಕ್ಷರಸ್ಥರಿಂದಲೇ ಹೆಚ್ಚು ನಿರ್ಲಕ್ಷ್ಯ: ಡಾ.ಅಶೋಕ್‌

ಕಸ್ಟಮ್ಸ್ ಕಾಲೊನಿಯಲ್ಲಿ ಕೋವಿಡ್–19 ಜಾಗೃತಿ ಬೀದಿ ನಾಟಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 17:06 IST
Last Updated 9 ಜನವರಿ 2021, 17:06 IST
ಮಂಗಳೂರಿನ ದತ್ತನಗರ ಕಸ್ಟಮ್ಸ್‌ ಕಾಲೊನಿಯಲ್ಲಿ ಶನಿವಾರ ಬೀದಿ ನಾಟಕ ಪ್ರದರ್ಶನ ನಡೆಯಿತು.
ಮಂಗಳೂರಿನ ದತ್ತನಗರ ಕಸ್ಟಮ್ಸ್‌ ಕಾಲೊನಿಯಲ್ಲಿ ಶನಿವಾರ ಬೀದಿ ನಾಟಕ ಪ್ರದರ್ಶನ ನಡೆಯಿತು.   

ಮಂಗಳೂರು: ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿಯುತ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವತಿಯಿಂದ ಶನಿವಾರ ಇಲ್ಲಿನ ದತ್ತನಗರದ ಕಸ್ಟಮ್ಸ್ ಕಾಲೊನಿಯಲ್ಲಿ ಕೋವಿಡ್–19 ಜಾಗೃತಿಯ ಬೀದಿ ನಾಟಕ ಪ್ರದರ್ಶನ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಕೋವಿಡ್-19 ಜಿಲ್ಲಾ ನೋಡಲ್ ಅಧಿಕಾರಿ ಡಾ.ಅಶೋಕ ಎಚ್., ‘ಕೋವಿಡ್-19 ಪ್ರಕರಣಗಳನ್ನು ವಿಶ್ಲೇಷಿಸುವಾಗ ಅಕ್ಷರಾಭ್ಯಾಸ ಇಲ್ಲದಿರುವವರಿಗಿಂತ ಅಕ್ಷರಾಭ್ಯಾಸ ಇರುವವರೆ ಹೆಚ್ಚು ಅಜ್ಞಾನ ಹಾಗೂ ನಿರ್ಲಕ್ಷ್ಯ ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಕೋವಿಡ್‌ನ ನಿಯಮಾವಳಿಯನ್ನು ಹೆಚ್ಚು ಪಾಲನೆ ಮಾಡುತ್ತಿದ್ದರೆ, ಸಾವು ನೋವಿನ ಅನಾಹುತವನ್ನು ತಪ್ಪಿಸಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಕಸ್ಟಮ್ಸ್‌ನ ಜಂಟಿ ಆಯುಕ್ತ ಜೋವಾನ್ನೆಸ್ ಜಾರ್ಜ್ ಸಿ. ಮಾತನಾಡಿ, ‘ಕೊರೊನಾ ವೈರಸ್ ನಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರದಂತೆ ಮಾಡಲು ನಾವು ಹೆಚ್ಚಿನ ಜಾಗೃತಿ ಹೊಂದುವ ಅವಶ್ಯಕತೆಯಿದೆ’ ಎಂದರು.

ADVERTISEMENT

ಪಾಲಿಕೆ ಸದಸ್ಯೆ ವನಿತಾ ಪ್ರಸಾದ್, ಅಧ್ಯಕ್ಷತೆ ವಹಿಸಿದ್ದ ಶಕ್ತಿ ಸಂಸ್ಥೆಯ ಅಧ್ಯಕ್ಷ ಕೆ.ಸಿ ನಾಯಕ್ ಮಾತನಾಡಿದರು. ಕೋವಿಡ್ ಜಾಗೃತ ದಳದ ಅಧಿಕಾರಿ ಡಾ. ಜಗದೀಶ ಕೆ., ಕಸ್ಟಮ್ಸ್‌ನ ಉಪ ಆಯುಕ್ತ ಪ್ರವೀಣ್ ಕಂಡಿ, ಸಹಾಯಕ ಆಯುಕ್ತ ರಮೇಶ್ಚಂದ್ರ, ಪ್ರಧಾನ ಲೆಕ್ಕಾಧಿಕಾರಿ ಹೀರೆಸ್ವಾಮಿ, ದತ್ತನಗರ ನಾಗರಿಕ ಸಮಿತಿ ಅಧ್ಯಕ್ಷ ವಿನಯ ಕುಮಾರ್, ಕಾರ್ಯದರ್ಶಿ ಹರೀಶ ಗೌಡ, ಶಕ್ತಿ ಸಂಸ್ಥೆಯ ರಮೇಶ ಕೆ., ಪ್ರಖ್ಯಾತ್ ರೈ, ವಿದ್ಯಾ ಕಾಮತ್ ಜಿ., ನೀಮಾ ಸಕ್ಸೇನಾ ವೇದಿಕೆಯಲ್ಲಿದ್ದರು.

ಬೀದಿ ನಾಟಕ: ಕೋವಿಡ್–19 ಕುರಿತು ಜಾಗೃತಿಯನ್ನು ಮೂಡಿಸುವುದು, ಭಯವನ್ನು ಪಡದೇ ಮುನ್ನೆಚ್ಚರಿಕೆ ಕ್ರಮ ವಹಿಸಿ ಸಮಾಜದಲ್ಲಿ ಬದುಕುವುದಕ್ಕೆ ಪ್ರೇರೇಪಿಸುವುದು ಈ ನಾಟಕದ ಉದ್ದೇಶ. ಇದರಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕ - ಶಿಕ್ಷಕೇತರರು ಅಭಿನಯಿಸಿದ್ದಾರೆ.

ಬೀದಿ ನಾಟಕವನ್ನು ಶಾಲೆಯ ಕನ್ನಡ ಅಧ್ಯಾಪಕ ಶರಣಪ್ಪ ರಚಿಸಿದ್ದು, ನಾಟಕಕ್ಕೆ ಸಂಗೀತ ಹಾಗೂ ನಿರ್ದೇಶನವನ್ನು ಮುರಲೀಧರ್ ಕಾಮತ್ ನೀಡಿದ್ದಾರೆ. ಅಧ್ಯಾಪಕಿ ಪ್ರೇಮಲತಾ ಸ್ವಾಗತಿಸಿದರು. ಭವ್ಯಶ್ರೀ ವಂದಿಸಿದರು. ಹಾಗೂ ರೇಖಾ ಡಿಕೋಸ್ಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.