ADVERTISEMENT

ಮಂಗಳೂರು: ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಧನ

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 14:54 IST
Last Updated 4 ಜೂನ್ 2021, 14:54 IST
ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಶುಕ್ರವಾರ ಅಸಂಘಟಿತ ಕಾರ್ಮಿಕರಿಗೆ ಕೋವಿಡ್‌ ಪರಿಹಾರ ಪ್ಯಾಕೇಜ್‌ ಕುರಿತ ಸಭೆ ನಡೆಯಿತು.
ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಶುಕ್ರವಾರ ಅಸಂಘಟಿತ ಕಾರ್ಮಿಕರಿಗೆ ಕೋವಿಡ್‌ ಪರಿಹಾರ ಪ್ಯಾಕೇಜ್‌ ಕುರಿತ ಸಭೆ ನಡೆಯಿತು.   

ಮಂಗಳೂರು: ರಾಜ್ಯದಾದ್ಯಂತಕೋವಿಡ್‌ ಲಾಕ್‌ಡೌನ್‌ ವಿಧಿಸಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ತೊಂದರೆಯಾಗಿರುವುದರಿಂದ ರಾಜ್ಯ ಸರ್ಕಾರ ಕಾರ್ಮಿಕರಿಗೆ ₹2,000 ಪರಿಹಾರಧನವನ್ನು ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.

ಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ನೀಡುವ ಕುರಿತು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕ ವಲಯದ 18 ರಿಂದ 65 ವರ್ಷದೊಳಗಿನ ಕ್ಷೌರಿಕ, ಅಗಸ, ಟೈಲರ್, ಅಕ್ಕಸಾಲಿಗ, ಕಮ್ಮಾರ, ಕುಂಬಾರ, ಗೃಹಕಾರ್ಮಿಕರು, ಚಿಂದಿ ಆಯುವವರು, ಹಮಾಲಿ, ಕಾರ್ಮಿಕರುಗಳು ಒಂದು ಬಾರಿ ಪರಿಹಾರವನ್ನು ಪಡೆಯಲು ಅರ್ಹರಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬೇಕು ಎಂದರು. ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾಸಿಂಧು ಕೇಂದ್ರದ ಸೇವಾಸಿಂಧು ಪೋರ್ಟಲ್‍ನಲ್ಲಿ ನಿಗದಿತ ಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಆಧಾರ್‌ ಕಾರ್ಡ್, ವಿಳಾಸ ದೃಢೀಕರಣದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮ ಛಾಯಾಚಿತ್ರವನ್ನು ಅಪಲೋಡ್ ಮಾಡಬೇಕು ಎಂದರು.

ADVERTISEMENT

ಕ್ಷೌರಿಕ, ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀೀಲ್ದಾರರು, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಯಾವುದಾದರೊಂದು ಅಧಿಕಾರಿಯಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು ಎಂದರು. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ಸೇವಾ ಸಿಂಧು ನೋಂದಣಿ: ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಡಿ ಒಟ್ಟು 86,000 ಕಟ್ಟಡ ಕಾರ್ಮಿಕರು ಹಾಗೂ 7,597 ಅಸಂಘಟಿತರು ಈಗಾಗಲೇ ನೋಂದಣಿಯಾಗಿರುತ್ತಾರೆ . ಕಟ್ಟಡ ಕಾರ್ಮಿಕರು ಕಾರ್ಮಿಕ ಕಾರ್ಡ್ ಹೊಂದಿದಲ್ಲಿ ಮತ್ತೊಮ್ಮೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡುವ ಅಗತ್ಯತೆ ಇರುವುದಿಲ್ಲ. ಅವರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದರು. ಕಳೆದ ಬಾರಿ ಅಗಸರು ಹಾಗೂ ಕ್ಷೌರಿಕರಿರು ನೋಂದಣಿ ಮಾಡಿ ಖಾತೆಗೆ ಹಣ ಜಮೆಯಾಗದವರೂ ಈ ಬಾರಿ ಇನ್ನೊಮ್ಮೆ ಸೇವಾ ಸಿಂಧು ಮೂಲಕ ನೋಂದಣಿ ಮಾಡಲು ಅವಕಾಶವಿರುತ್ತದೆ ಎಂದರು. ಹೊರರಾಜ್ಯದಿಂದ ಜಿಲ್ಲೆಗೆ ಬಂದು ಇಲ್ಲಿಯ ಕಾರ್ಮಿಕರಾಗಿದ್ದು ಜೊತೆಗೆ ಇಲ್ಲಿನ ಬಿ.ಪಿ.ಎಲ್. ಕಾರ್ಡ್ ಹೊಂದಿದವರೂ ಕೂಡ ಇದರ ಲಾಭ ಪಡೆಯಬಹುದಾಗಿದೆ. ಶ್ರಮಿಕರ ವರ್ಗದವರಲ್ಲಿ ಬಿ.ಪಿ.ಎಲ್. ಕಾರ್ಡ್ ಅಥವಾ ಟ್ರೇಡ್ ಲೈಸನ್ಸ್ ಹೊಂದಿರುವವ ಎಲ್ಲರಿಗೂ ಪರಿಹಾರ ಮೊತ್ತ ಸಿಗುವಂತೆ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಡಾ. ಕುಮಾರ್, ನಗರಾಭಿವೃದ್ಧಿ ಕೋಶದ` ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಕಾರ್ಮಿಕ ಅಧಿಕಾರಿ ವಿಲ್ಮಾ, ಕಾರ್ಮಿಕ ಸಂಘದ ಅದ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.