ADVERTISEMENT

ಬೆಳ್ತಂಗಡಿ: 162 ಮಂದಿಗೆ ಕೋವಿಡ್

ಅಗತ್ಯ ವಸ್ತುಗಳ ಖರೀದಿಗೆ ಜನರ ಹೆಚ್ಚಿನ ಓಡಾಟ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:49 IST
Last Updated 1 ಮೇ 2021, 7:49 IST
ಬೆಳ್ತಂಗಡಿಯಲ್ಲಿ ವಾಹನ ಸವಾರರನ್ನು ವಿಚಾರಿಸುತ್ತಿರುವ ಪೊಲೀಸರು.
ಬೆಳ್ತಂಗಡಿಯಲ್ಲಿ ವಾಹನ ಸವಾರರನ್ನು ವಿಚಾರಿಸುತ್ತಿರುವ ಪೊಲೀಸರು.   

ಬೆಳ್ತಂಗಡಿ: ಕೋವಿಡ್‌ ಕರ್ಫ್ಯೂನ ಮೂರನೇ ದಿನ ಶುಕ್ರವಾರ ತಾಲ್ಲೂಕಿನ ಪ್ರಮುಖ ಪೇಟೆಗಳು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಉತ್ತಮ ಸ್ಪಂದನೆ ದೊರಕಿದೆ.

ಬೆಳಿಗ್ಗೆ 6ರಿಂದ 10ರ ತನಕ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಕಂಡುಬಂತು. ಈ ಅವಧಿಯಲ್ಲಿ ವಾಹನಗಳ ಓಡಾಟ ಜೋರಾಗಿತ್ತು.

ಸರ್ಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಕಚೇರಿಗಳು ತೆರೆದಿದ್ದರೂ ಜನರ ಓಡಾಟ ಮಾತ್ರ ವಿರಳವಾಗಿತ್ತು. ತಮ್ಮ ವಾಹನಗಳಿಗೆ ಪಾಸ್ ಮಾಡಿಸಿಕೊಂಡ ಅಗತ್ಯ ವಸ್ತುಗಳ ವಾಹನಗಳ ಓಡಾಟ ಎಂದಿನಂತೆ ಇತ್ತು. ಹಾಲು, ತರಕಾರಿ, ಮೀನು, ಮಾಂಸದಂಗಡಿ, ಬೇಕರಿ ಮಳಿಗೆಗಳು, ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಜನರು ಬೆಳಗ್ಗೆನೇ ಹಾಜರಾಗಿದ್ದರು.

ADVERTISEMENT

ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ, ಮಡಂತ್ಯಾರು, ಕಲ್ಲೇರಿ, ಧರ್ಮಸ್ಥಳ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ಬೆಳಿಗ್ಗೆ 10 ಗಂಟೆಗಳ ಬಳಿಕ ಅನಗತ್ಯ ಓಡಾಟ ನಡೆಸುವ ಓಡಾಡುತ್ತಿರುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಡಿವಾಣ ಹಾಕುವ ಕೆಲಸ ಮಾಡುತ್ತಿದ್ದಾರೆ. ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂದೇಶ್ ಪಿ.ಜಿ. ಮಾರ್ಗದರ್ಶನದಲ್ಲಿ ಆಯಾಯ ಠಾಣೆಯ ಎಸ್‌ಐಗಳಾದ ನಂದ ಕುಮಾರ್, ಸೌಮ್ಯಾ, ಲೋಲಾಕ್ಷ, ಪವನ್ ಕುಮಾರ್ ಹಾಗೂ ಓಡಿಯಪ್ಪ ನೇತೃತ್ವದಲ್ಲಿ ಪೊಲೀಸರ ತಂಡ ಸೂಕ್ತ ಬಂದೋಬಸ್ತ್‌ ಮಾಡಿದ್ದರು.
ಮಾಸ್ಕ್ ಧರಿಸದೇ ಓಡಾಟ ನಡೆಸಿದವರ ಮೇಲೆ ದಂಡ ವಿಧಿಸುವ ಕಾರ್ಯ ನಡೆದಿದೆ.

ಕೋವಿಡ್ ನಿಯಮ ಪಾಲನೆಯನ್ನು ಮಾಡಿಕೊಂಡು ಶುಭ ಕಾರ್ಯಗಳಿಗೆ 50 ಮಂದಿ ಮೀರದಂತೆ ಕಾರ್ಯಕ್ರಮ ನಡೆಸಿದರೂ ಕೆಲವೊಂದು ಕಡೆಗಳಲ್ಲಿ ನಿಯಮ ಮೀರಿ ಕಾರ್ಯಕ್ರಮಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಇಲಾಖೆಗಳು ಎಷ್ಟೇ ಕಡಿವಾಣ ಹಾಕಿದರೂ ಅನಗತ್ಯ ಓಡಾಟ ನಡೆಸುವವರೇ ಜಾಸ್ತಿ. ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದೆ. ಅನಗತ್ಯ ಓಡಾಟ ನಡೆಸುವವರಿಗೆ ಎಚ್ಚರಿಕೆ ನೀಡಿ ಬಿಡಲಾಗುತ್ತಿದೆ. ಇವೆಲ್ಲದರ ಮಧ್ಯೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ದಾಖಲೆಯ ಪ್ರಕರಣ: ‘ಬೆಳ್ತಂಗಡಿ ತಾಲ್ಲೂಕಿನಲ್ಲಿ ಗುರುವಾರ 93 ಮಂದಿಗೆ ಕೋವಿಡ್‌ ದೃಢಪಟ್ಟಿತ್ತು. ಶುಕ್ರವಾರ 162 ಮಂದಿಗೆ ಸೋಂಕು ದೃಢಪಟ್ಟಿದೆ. ಏಪ್ರಿಲ್‌ನಿಂದ ಈವರೆಗೆ ಒಟ್ಟು 618 ಪ್ರಕರಣ ದಾಖಲಾಗಿದ್ದು, ಇದೀಗ 343 ಸಕ್ರಿಯ ಪ್ರರಕಣವಾಗಿದೆ. ಇದರಲ್ಲಿ 27 ಮಂದಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಖಾಸಗಿ ಆಸ್ಪತ್ರೆ ಹಾಗೂ ವೆನ್ಲಾಕ್‌ ಆಸ್ಪತ್ರೆಯಲ್ಲಿ, ಮನೆಗಳಲ್ಲಿ ಹೋಂ ಐಸೊಲೇಶನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.