ADVERTISEMENT

ಕೋವಿಡ್‌: ದೂರು ನೀಡಿದ ಐದು ತಿಂಗಳ ಬಳಿಕ ತನಿಖೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 16:20 IST
Last Updated 9 ಡಿಸೆಂಬರ್ 2020, 16:20 IST

ಮಂಗಳೂರು: ಕೋವಿಡ್ ಏರುಗತಿಯಲ್ಲಿದ್ದ ಸಂದರ್ಭ ಖಾಸಗಿ ಆಸ್ಪತ್ರೆಗಳ ಗಂಟಲ ದ್ರವ ಪರೀಕ್ಷೆಯ ವರದಿಗಳ ಎಡವಟ್ಟಿನ ಬಗ್ಗೆ ಸಲ್ಲಿಸಿದ್ದ ದೂರಿನ ವಿಚಾರಣೆಯು, ಐದು ತಿಂಗಳ ಬಳಿಕ ಸೋಂಕು ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಆರಂಭಗೊಂಡಿದೆ.

‘ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಗಂಟಲ ದ್ರವ ಮಾದರಿ ಪರೀಕ್ಷೆಯ ವರದಿಗಳಲ್ಲಿ ಎಡವಟ್ಟು ಆಗುತ್ತಿದ್ದು, ನೊಂದವರಿಗೆ ನ್ಯಾಯ ಹಾಗೂ ಇಂತಹ ಅನ್ಯಾಯಗಳನ್ನು ತಡೆಗಟ್ಟುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಜುಲೈ 4ರಂದು ದೂರು ನೀಡಲಾಗಿತ್ತು. ಅದರೆ, ಡಿ.2ರಂದು ಪತ್ರ ಕಳುಹಿಸಿರುವ ತನಿಖಾಧಿಕಾರಿ ಡಿ.9 ಬುಧವಾರ ನನ್ನ ಹೇಳಿಕೆಯನ್ನು ದಾಖಲಿಸಲು ತಿಳಿಸಿದ್ದರು. ಎಲ್ಲ ಹೋದ ಮೇಲೆ ನಾನು ಹಾಜರಾಗಿ ವರದಿ ಸಲ್ಲಿಸಿದರೂ ಸಮಾಜಕ್ಕೆ ಏನು ಪ್ರಯೋಜನ. ಅದಕ್ಕಾಗಿ ಇ–ಮೇಲ್ ಮೂಲಕ ನನ್ನ ಹೇಳಿಕೆ ಸಲ್ಲಿಸಿದ್ದೇನೆ’ ಎಂದು ದೂರುದಾರ ಉಮರ್ ಯು.ಎಚ್. ತಿಳಿಸಿದ್ದಾರೆ.

‘ಸಾರ್ವಜನಿಕ ಹಿತಾಸಕ್ತಿಯ ದೂರು ನೀಡಿದ ಐದು ತಿಂಗಳ ಬಳಿಕ ತನಿಖೆಗೆ ಮುಂದಾಗುತ್ತಿರುವ ಕ್ರಮವನ್ನು ನಾನು ಖಂಡಿಸುತ್ತೇನೆ. ಇದರಿಂದ ತಮ್ಮ ಮತ್ತು ನನ್ನ ಸಮಯ ವ್ಯರ್ಥವೇ ಹೊರತು ಸಮಾಜಕ್ಕೆ ಪ್ರಯೋಜನ ಇಲ್ಲ. ಇನ್ನಾದರೂ ಸಾರ್ವಜನಿಕ ಹಿತಾಸಕ್ತಿಯ ದೂರುಗಳ ಬಗ್ಗೆ ಶೀಘ್ರವಾಗಿ ಸ್ಪಂದಿಸಿ ಎಂದು ವಿನಂತಿಸುತ್ತೇನೆ’ ಎಂದು ತನಿಖಾಧಿಕಾರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಉಮರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.