ADVERTISEMENT

ಕಾಸರಗೋಡು: ಒಂದೇ ದಿನ 34 ಕೊರೊನಾ ಸೋಂಕು ಪ್ರಕರಣ ದೃಢ

ಸೋಂಕಿತ 47 ಜನರಲ್ಲಿ 40 ಮಂದಿ ಗಲ್ಫ್‌ ರಾಷ್ಟ್ರಗಳಿಂದ ಬಂದವರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 16:36 IST
Last Updated 27 ಮಾರ್ಚ್ 2020, 16:36 IST
   

ಮಂಗಳೂರು: ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ 34 ಮಂದಿಗೆ ‘ಕೋವಿಡ್‌–19’ ಸೋಂಕು ತಗುಲಿರುವುದು ಶುಕ್ರವಾರ ಒಂದೇ ದಿನ ದೃಢಪಟ್ಟಿದೆ. ಇದರೊಂದಿಗೆ ಅಲ್ಲಿ ಸೋಂಕು ತಗುಲಿರುವವರ ಸಂಖ್ಯೆ 81ಕ್ಕೇರಿದೆ.

ಫೆಬ್ರುವರಿ ತಿಂಗಳಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ‘ಕೋವಿಡ್‌–19’ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿತ್ತು. ಆ ಬಳಿಕ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಎರಡು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಶುಕ್ರವಾರ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭೀತಿ ಸೃಷ್ಟಿಸಿದೆ.

ಕಾಸರಗೋಡು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಜಿಲ್ಲೆಯ 5,000ಕ್ಕೂ ಹೆಚ್ಚು ಮಂದಿಯ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣದಿಂದ ನಿತ್ಯವೂ 50ರಿಂದ 100 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ನಿಗಾದಲ್ಲಿ ಇರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರಿಗಾಗಿ ಸಜ್ಜುಗೊಳಿಸಿದ್ದ ಪ್ರತ್ಯೇಕ (ಐಸೋಲೇಷನ್‌) ವಾರ್ಡ್‌ಗಳು ಬಹುತೇಕ ಭರ್ತಿಯಾಗಿವೆ.

ADVERTISEMENT

ಗಲ್ಫ್‌ ರಾಷ್ಟ್ರಗಳ ನಂಟು

ಇತ್ತೀಚೆಗೆ ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ 40 ಮಂದಿ ಗಲ್ಫ್‌ ರಾಷ್ಟ್ರಗಳಿಂದ ವಾಪಸ್‌ ಬಂದಿರುವವರೇ ಆಗಿದ್ದಾರೆ ಎಂಬುದನ್ನು ಕೇರಳ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಈ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದ ಜನರಲ್ಲೂ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ವಿದೇಶಗಳಿಂದ ಬಂದಿರುವ ಹಲವರು ಗೃಹ ಪರಿವೀಕ್ಷಣೆಯಲ್ಲಿ ಉಳಿಯದೇ ಕಾಸರಗೋಡು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಓಡಾಡಿದ್ದಾರೆ. ಮದುವೆ, ಗೃಹಪ್ರವೇಶ ಸೇರಿದಂತೆ ಸಮಾರಂಭಗಳಲ್ಲೂ ಪಾಲ್ಗೊಂಡಿದ್ದಾರೆ. ಈ ವ್ಯಕ್ತಿಗಳ ಜೊತೆ ನೇರವಾಗಿ ಸಂಪರ್ಕದಲ್ಲಿದ್ದ ಕೆಲವರಿಗೆ ಈಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಎರಡನೆಯ ಮತ್ತು ಮೂರನೆಯ ಹಂತದ ಸಂಪರ್ಕ ಹೊಂದಿದ್ದವರಿಗೂ ಸೋಂಕು ಹರಡಬಹುದು ಎಂಬ ಭೀತಿ ಹೆಚ್ಚುತ್ತಿದೆ.

ವಿದೇಶಗಳಿಂದ ಕಾಸರಗೋಡಿಗೆ ಹಿಂದಿರುಗಿರುವವರಲ್ಲಿ ಬಹುತೇಕರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವೇ ಬಂದಿದ್ದಾರೆ. ಕೋವಿಡ್‌–19 ದೃಢಪಟ್ಟ ಕೆಲವರು ಮಂಗಳೂರು ನಗರಕ್ಕೂ ಬಂದು ಹೋಗಿದ್ದಾರೆ. ಈ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವ ನಗರದ ಜನರಿಗೂ ಹರಡಬಹುದು ಎಂಬ ಆತಂಕ ತೀವ್ರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.