ADVERTISEMENT

ಊರಿಗೆ ವಲಸಿಗರ ಪ್ರಯಾಣ ಇಂದು

ಕೋವಿಡ್‌ ಕರ್ಫ್ಯೂ: ಕಾರ್ಮಿಕರಿಗೆ ಆಶ್ರಯ ನೀಡಿದ ಮುಂಡಾಜೆ ಸಚಿನ್ ಭಿಡೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:30 IST
Last Updated 10 ಮೇ 2021, 5:30 IST
ಮುಂಡಾಜೆಯ ಸಚಿನ್ ಭಿಡೆ ಮನೆಯಲ್ಲಿ ಆಶ್ರಯ ಪಡೆದ ನಿರಾಶ್ರಿತ ಕಾರ್ಮಿಕರು
ಮುಂಡಾಜೆಯ ಸಚಿನ್ ಭಿಡೆ ಮನೆಯಲ್ಲಿ ಆಶ್ರಯ ಪಡೆದ ನಿರಾಶ್ರಿತ ಕಾರ್ಮಿಕರು   

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಗ್ರಾಮದ ದುಂಬೆಟ್ಟು ನಿವಾಸಿ ಸಚಿನ್ ಭಿಡೆ ಅವರು ಕೋವಿಡ್‌ ಕರ್ಫ್ಯೂ ಅವಧಿಯಲ್ಲಿ ನಿರಾಶ್ರಿತರಾದ ಹೊರ ಜಿಲ್ಲೆಗಳ 20 ಕಾರ್ಮಿಕರಿಗೆ ತಮ್ಮ ಮನೆಯಲ್ಲಿ ಉಚಿತ ಊಟ, ವಸತಿಯೊಂದಿಗೆ ಆಶ್ರಯ ನೀಡಿದ್ದಾರೆ. ಅಗತ್ಯ ಇದ್ದವರಿಗೆ ಔಷಧಿಯನ್ನೂ ಕೊಡಿಸಿದ್ದಾರೆ.

ಇವರ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಕಾಪು ಎಂಬಲ್ಲಿ ಮಜಲು ಕಿಂಡಿ ಅಣೆಕಟ್ಟು ದುರಸ್ತಿ ಕಾರ್ಯ ₹ 50 ಲಕ್ಷ ವೆಚ್ಚದಲ್ಲಿ ಒಂದೂವರೆ ತಿಂಗಳಿನಿಂದ ನಡೆಯುತ್ತಿದೆ. ಕಾಮಗಾರಿ ಶನಿವಾರ ಪೂರ್ಣಗೊಂಡಿದೆ. ಗುತ್ತಿಗೆದಾರರು ಕೇರಳದವರಾಗಿದ್ದು, ಕೇರಳ ಮತ್ತು ಬೆಳಗಾವಿಯಿಂದ ಕಾರ್ಮಿಕರನ್ನು ಕರೆಸಿಕೊಂಡಿದ್ದರು. ಕಾರ್ಮಿಕರಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳೂ ಇದ್ದಾರೆ.

ಕರ್ಫ್ಯೂನಿಂದಾಗಿ ಕಾರ್ಮಿಕರು ನಿರಾಶ್ರಿತರಾದಾಗ ಸಚಿನ್ ಭಿಡೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟು ಸ್ವಲ್ಪ ದೂರದಲ್ಲಿರುವ ಅವರ ಇನ್ನೊಂದು ಮನೆಯಲ್ಲಿ ವಾಸ್ತವ್ಯ ಮಾಡಿದರು.

ADVERTISEMENT

ಕಾಮಗಾರಿ ಪೂರ್ಣಗೊಂಡಿರುವು ದರಿಂದ ಜಿಲ್ಲಾಧಿಕಾರಿಯ ನಿರ್ದೇಶನ ದಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ ಸಲಹೆಯಂತೆ ಬೆಳ್ತಂಗಡಿ ತಾಲ್ಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕ ಹರೀಶ್ ಎಸ್.ಎನ್.
ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಊರಿಗೆ ಬಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಸೋಮವಾರ ಕಾರ್ಮಿಕರು ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ತಮ್ಮ ಊರಿಗೆ ಪ್ರಯಾಣಿಸುವರು.

ಇದಕ್ಕಾಗಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ವಿಶೇಷ ಅನುಮತಿ ನೀಡಿ ಸಹಕರಿಸಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್ ಅವಧಿ ಯಲ್ಲಿ ಸಚಿನ್ ಭಿಡೆ ತಮ್ಮ ಮನೆಯಲ್ಲಿ ಫ್ರೆಂಚ್ ಪ್ರಜೆಗೆ ಆಶ್ರಯ ನೀಡಿ ಕನ್ನಡ ಓದಲು, ಬರೆಯಲು ಕಲಿಸಿದ್ದರು.

ಬಾದಾಮಿ ಕಾರ್ಮಿಕರು ತವರಿಗೆ

ಪುತ್ತೂರು: ಒಳಮೊಗ್ರು ಮತ್ತು ಕೆದಿಲ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು ಲಾಕ್‌ಡೌನ್ ಪ್ರಯುಕ್ತ ಭಾನುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಸ್ವಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದರು.

ಬಾಗಲಕೋಟೆ ಜಿಲ್ಲಾ ಬಾದಾಮಿ ತಾಲ್ಲೂಕು ನರಿನೂರ ಗ್ರಾಮ ಮತ್ತು ಹೊಸೂರು ಗ್ರಾಮಗಳ 32 ಮಂದಿ ಕಟ್ಟಡ ನಿರ್ಮಾಣದ ವಲಸೆ ಕಾರ್ಮಿಕರು ಎರಡು ಗ್ರಾಮಗಳಲ್ಲಿ ಸಿಲುಕಿಕೊಂಡಿದ್ದರು. ಈ ಬಗ್ಗೆ ಶಾಸಕರ ವಾರ್‌ರೂಮ್ ಮತ್ತು ಜಿಲ್ಲಾಡಳಿತ, ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಮಾತುಕತೆ ನಡೆಸಿ, ಅವರನ್ನು ಪುತ್ತೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಸ್ವಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.