ADVERTISEMENT

ಕೋವಿಡ್: ಕೇರಳ ಕರ್ನಾಟಕ ಗಡಿ ತಲಪಾಡಿಯಲ್ಲಿ ಮೂರು ಪಾಳಿಯಲ್ಲಿ ತಪಾಸಣೆ

ಜಿಲ್ಲೆಯ ಗಡಿಭಾಗ ತಲಪಾಡಿಯಲ್ಲಿ ಬಿಗಿ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 12:22 IST
Last Updated 29 ನವೆಂಬರ್ 2021, 12:22 IST
ಡಾ.ಕಿಶೋರ್‌ ಕುಮಾರ್‌
ಡಾ.ಕಿಶೋರ್‌ ಕುಮಾರ್‌   

ಮಂಗಳೂರು: ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನಿರ್ದೇಶನದಂತೆ ಜಿಲ್ಲೆಯ ಗಡಿಭಾಗವಾದ ತಲಪಾಡಿಯಲ್ಲಿ ಸೋಮವಾರದಿಂದ ಮೂರು ಪಾಳಿಯಲ್ಲಿ ಕೋವಿಡ್ ತಪಾಸಣೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಎರಡನೇ ಅಲೆ ತಗ್ಗಿ, ಲಾಕ್‌ಡೌನ್ ತೆರವುಗೊಂಡ ನಂತರ, ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಆಧಾರದಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈಗ ಪುನಃ ಕೋವಿಡ್ ತಪಾಸಣೆ ಆರಂಭಿಸಲಾಗಿದೆ’ ಎಂದರು.

ನವೆಂಬರ್ 12ರ ನಂತರ ಜಿಲ್ಲೆಗೆ ಬಂದಿರುವ ವೈದ್ಯಕೀಯ, ಅರೆ ವೈದ್ಯಕೀಯ ವಿದ್ಯಾರ್ಥಿಗಳು, ವಸತಿ ನಿಲಯಗಳಲ್ಲಿ ಬಂದಿರುವ ವಿದ್ಯಾರ್ಥಿಗಳ ಕಡ್ಡಾಯ ತಪಾಸಣೆ ಮಾಡುವಂತೆ, ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಕೇರಳದಿಂದ ಜಿಲ್ಲೆಗೆ ಸಂಚರಿಸುವವರು ಸಹ 16 ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ನಡೆಸಬೇಕು ಎಂದು ಹೇಳಿದರು.

ADVERTISEMENT

ರೂಪಾಂತರಿ ಓಮೈಕ್ರಾನ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದು ಡೆಲ್ಟಾ ವೈರಸ್‌ಗಿಂತ ಭಿನ್ನವಾಗಿದೆ. ಆದರೆ, ಕೆಲ ದಿನಗಳ ಹಿಂದಷ್ಟೇ ಪತ್ತೆಯಾಗಿರುವ ಕಾರಣ, ಇದರಿಂದ ಆಗುವ ಪರಿಣಾಮಗಳ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಾಗಿದೆ. ವಿದೇಶದಿಂದ ಬರುವವರ ಮೇಲೆ ನಿಗಾ ಇಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಹೊಸ ವೈರಾಣು ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಆದರೆ, ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಎಚ್‌ಐವಿ ಇಳಿಕೆ: ಜಿಲ್ಲೆಯಲ್ಲಿ ಐದು ವರ್ಷಗಳಿಂದ ಎಚ್‌ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಈ ವರ್ಷ ಅಕ್ಟೋಬರ್‌ವರೆಗೆ 149 ಜನರಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ಡಿಸೆಂಬರ್ 1ರಂದು ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ ಹಿನ್ನೆಲೆಯಲ್ಲಿ, ಮಾಹಿತಿ ನೀಡಿದ ಅವರು, ‘ಎಚ್‌ಐವಿ ಸೋಂಕಿನ ಬಗ್ಗೆ ಮಾಹಿತಿ ಕೊರತೆ, ಲೈಂಗಿಕ ವಿಚಾರಗಳ ಬಗ್ಗೆ ಮುಜುಗರ, ಅಪಾಯಕಾರಿ ನಡವಳಿಕೆ, ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣ, ಲೈಂಗಿಕ ಶೋಷಣೆ ಎಚ್‌ಐವಿ ಸೋಂಕು ಹೆಚ್ಚಲು ಕಾರಣವಾಗುತ್ತವೆ’ ಎಂದರು.

ಎಚ್‌ಐವಿಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಆದರೆ, ಜೀವನ ಶೈಲಿ ಬದಲಾಯಿಸಿಕೊಂಡರೆ, ಹೆಚ್ಚು ವರ್ಷ ಬದುಕಬಹುದು. ಎಆರ್‌ಟಿ ಚಿಕಿತ್ಸೆಯಿಂದ ಎಚ್ಐವಿ ವೈರಸ್ ಬೆಳವಣಿಗೆಯನ್ನು ಕುಂಠಿತಗೊಳಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎಂದು ತಿಳಿಸಿದರು. ಡಾ. ಬದ್ರುದ್ದೀನ್ ಹಾಗೂ ಮಹೇಶ್ ಇದ್ದರು.

‘20 ಆಪ್ತ ಸಮಾಲೋಚನಾ ಕೇಂದ್ರ’

2007-08ರಿಂದ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 10,14,925 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, 346 ಗರ್ಭಿಣಿಯರು ಸೇರಿದಂತೆ 10,109 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಡಾ. ಕಿಶೋರ್ ಕುಮಾರ್ ಹೇಳಿದರು.

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣ ಹಾಗೂ ಜಾಗೃತಿ ಮೂಡಿಸಲು 20 ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ ಕೇಂದ್ರಗಳು (ಐಸಿಟಿಸಿ) ಕೆಲಸ ಮಾಡುತ್ತಿವೆ. ಅದಲ್ಲದೆ ಲೈಂಗಿಕ ಕಾಯಿಲೆಗಳ ಚಿಕಿತ್ಸಾಲಯ, ರಾಜ್ಯ ರಕ್ತ ಸಂಶೋಧನಾ ಪ್ರಯೋಗಾಲಯ ಕೂಡ ಜಿಲ್ಲೆಯಲ್ಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.